

ಕೋಲಾರ: ಜೀವನದಲ್ಲಿ ಯೋಗ ಅಭ್ಯಾಸವನ್ನು ರೂಢಿಸಿಕೊಂಡಾಗ ದೇಹದಲ್ಲಿ ಆರೋಗ್ಯಕರ ಬದಲಾವಣೆ ಕಾಣಬಹುದಾಗಿದ್ದು, ಯಾರೂ ಸಹ ಬೆಳ್ಳಂಬೆಳಗ್ಗ ಮೊಬೈಲ್ ಹಿಡಿಯದೆ, ಯೋಗ ಅಭ್ಯಾಸ ಮಾಡಬೇಕು ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆಯಿಂದ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 11ನೇ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಜನರು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಬಳಸುತ್ತಾರೆ, ಅದನ್ನು ನಿಯಂತ್ರಿಸುವ ಮೂಲಕ ಯೋಗವನ್ನು ರೂಢಿಸಿಕೊಳ್ಳಬೇಕು.
ಯೋಗ ಅಭ್ಯಾಸದಲ್ಲಿ ತೋಡಗಿರುವವರನ್ನು ನೋಡಿದರೆ ಅವರು ಎಷ್ಟು ಆರೋಗ್ಯವಂತರಾಗಿದ್ದಾರೆ ಎಂಬುದನ್ನು ಕಾಣಬಹುದು. ಹಾಗಾಗಿ ಯೋಗ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಯುಗ ಯುಗಳಿಂದಲೂ ಯೋಗವು ಚಾಲ್ತಿಯಲ್ಲಿದೆ. ಇದೀಗ ಅಂತಾರಾಷ್ಟ್ರೀಯ ಮನ್ನಣೆ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಎಂದು ಘೋಷಿಸಿದೆ. ಆಚರಣೆ ಮೂಲಕ ಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಶಾಲಾ&ಕಾಲೇಜುಗಳಲ್ಲಿ ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು. ಆ ಮೂಲಕ ಜೀವನದ ಒಂದು ಭಾಗವಾಗಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರವಿಣ್.ಪಿ.ಬಾಗೇವಾಡಿ, ಪೊಲೀಸ್ ವರಿಷ್ಠಾಧಿಕಾರಿಗಳಾದ ಕೋಲಾರ ಬಿ.ನಿಖಿಲ್, ಕೆ.ಎಂ.ಶಾಂತರಾಜು, ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಘವೇಂದ್ರ ಶೆಟ್ಟಿಗಾರ್, ಸಮಾಜ ಸೇವಕ ಸಿ.ಎಂ.ಆರ್.ಶ್ರೀನಾಥ್ ಉಪಸ್ಥಿತರಿದ್ದರು.
ಶಾಂತಿ, ಸಾಮರಸ್ಯಕ್ಕೆ ಸಹಕಾರಿ
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಸದೃಢರಾಗಲು ಯೋಗ ಮಹತ್ವದ್ದಾಗಿದೆ. ಎಲ್ಲರಲ್ಲೂ ಶಾಂತಿ, ಸಾಮರಸ್ಯ, ಪರಸ್ಪರ ಗೌರವವನ್ನು ಬೆಸೆಯಲು ಯೋಗ ಸಹಕಾರಿಯಾಗಿದೆ ಎಂದು ಹೇಳಿದರು. ಸಮಾಜದಲ್ಲಿ ಒತ್ತಡವಿಲ್ಲದ ಮನೆ, ವ್ಯಕ್ತಿ ನೋಡಲು ಸಾಧ್ಯವಿಲ್ಲ. ಒತ್ತಡವನ್ನು ನಿವಾರಿಸುವುದು ದೊಡ್ಡ ಸವಾಲಾಗಿದೆ. ಈ ಒತ್ತಡವನ್ನು ನಿಭಾಯಿಸಲು, ಶಾಶ್ವತ ಪರಿಹಾರ ಯೋಗ. ಯೋಗವನ್ನು ಅಂತರ್ಗತ ಮಾಡಿಕೊಳ್ಳುವುದಷ್ಟೆ ಅಲ್ಲ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಪರಿಣಾಮಕಾರಿ ಸಾಧನ. ಯಾವ ಮನೆಯಲ್ಲಿ ಆರೋಗ್ಯ, ನೆಮ್ಮದಿ ಇರುತ್ತದೆಯೋ ಆ ಮನೆ ಸಂಪದ್ಭರಿತವಾಗಿರುತ್ತದೆ ಎಂದು ಹೇಳಿದರು.