

ಶ್ರೀರಂಗಪಟ್ಟಣ: ತಾಲೂಕಿನ ತಡಗವಾಡಿಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರ ತೆರೆಯಲಾಗಿದ್ದು, ರೈತರು ಸದುಪಯೋಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸಲಹೆ ನೀಡಿದರು.
ಗ್ರಾಮದ ಜೈ ಹನುಮಾನ್ ರೈಸ್ ಮಿಲ್‌ನಲ್ಲಿ ಭತ್ತ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಿಲ್ಲಿನಲ್ಲಿ ಧಾನ್ಯ ಖರೀದಿ ಕೇಂದ್ರ ತೆರೆದು ರೈತರಿಂದ ಭತ್ತ ಹಾಗೂ ರಾಗಿಯನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲು ಅವಕಾಶ ಒದಗಿಸಲಾಗಿದೆ. ಮೊದಲಿಗೆ ತಾಲೂಕಿನಲ್ಲಿ ಒಂದು ಕೇಂದ್ರವನ್ನು ತೆರೆಯಲಾಗಿದ್ದು, ನೋಂದಾಯಿತ ರೈತರು ನಿಯಮಾನುಸಾರ ನಿಗದಿತ ಚೀಲದಲ್ಲಿ ಗುಣಮಟ್ಟದ ರಾಗಿ ಮತ್ತು ಭತ್ತವನ್ನು ಸರಬರಾಜು ಮಾಡಿ ರಶೀದಿ ಪಡೆಯಬಹುದು. ಬೆಂಬಲ ಬೆಲೆಯೊಂದಿಗೆ ಹಣವನ್ನು ತಮ್ಮ ಖಾತೆಗೆ ಸರ್ಕಾರದಿಂದಲೇ ಜಮಾ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನೋಂದಾಯಿತ ರೈತರ ಮೊಬೈಲ್‌ಗೆ ಭತ್ತ ಖರೀದಿ ಕೇಂದ್ರದಿಂದ ಸಂದೇಶ ರವಾನೆಯಾದ ಬಳಿಕ ಭತ್ತವನ್ನು ರೈಸ್ ಮಿಲ್‌ಗೆ ಆಯಾ ದಿನಾಂಕದಂದು ಸರಬರಾಜು ಮಾಡಲು ಸೂಚಿಸಿದರು.
ರಾಜ್ಯ ಉಗ್ರಾಣ ನಿಗಮದ ಉಪ ವ್ಯವಸ್ಥಾಪಕ ಲೂನಾರ್, ಜಿಲ್ಲಾ ಉಪ ನಿರ್ದೇಶಕಿ ಕುಮುದಾ ಶರತ್, ತಾಲೂಕು ಆಹಾರ ನಿರೀಕ್ಷಕಿ ಪೂರ್ಣಿಮಾ, ಉಪ ತಹಸೀಲ್ದಾರ್ ಜಯರಾಂ ಮತ್ತಿತರರು ಹಾಜರಿದ್ದರು.