

ಹಾನಗಲ್ಲ: ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಪತ್ತೆ, ಉಚಿತ ಇಸಿಜಿ ಮತ್ತು ಉಚಿತ 2ಡಿ ಎಕೋ ತಪಾಸಣೆ ನಡೆಸಲಾಯಿತು. ವಿವಿಧ ಸರ್ಕಾರಿ ಯೋಜನೆಗಳಡಿ ರೋಗ ನಿರ್ಣಯದ ಪ್ರಕರಣಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಲಹೆ ನೀಡಿ ಕಳುಹಿಸಲಾಯಿತು.
ಪಟ್ಟಣದ ಆಕ್ಸಫರ್ಡ್ ಶಾಲಾವರಣದಲ್ಲಿ ಡಾ. ಗಣೇಶ ವೆರ್ಣೆಕರ ಮಾರ್ಗದರ್ಶನದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಪಟ್ಟಣದಲ್ಲಿ ಭಾನುವಾರ ಏರ್ಪಾಟಾಗಿದ್ದ ಉಚಿತ ವೈದ್ಯಕೀಯ ತಪಾಸಣೆ ಶಿಬಿರದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ನೂರಾರು ರೋಗಿಗಳು ತಪಾಸಣೆ ಮಾಡಿಸಿಕೊಂಡರು.
ದೈವಜ್ಞ ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ಸುರೇಶ ರಾಯ್ಕರ ಮಾತನಾಡಿ, ತಾಲೂಕಿನ ಜನರ ಆರೋಗ್ಯದ ಬಗೆಗೆ ಕಾಳಜಿ ವಹಿಸಲು ಶಿಬಿರ ಆಯೋಜಿಸಲಾಗಿದೆ. ಕಾಲಕಾಲಕ್ಕೆ ಇಂತಹ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಶಿಬಿರದ ಸಂಘಟಕ ಡಾ.ಗಣೇಶ ವೆರ್ಣೆಕರ ಮಾತನಾಡಿದರು. ಹುಬ್ಬಳ್ಳಿಯ ವಿಹಾನ್ ಹೃದ್ರೋಗ ಆಸ್ಪತ್ರೆಯ ತಂಡದ ತಜ್ಞ ವೈದ್ಯರು ಹೃದಯ ಸಂಬಂಧಿ ರೋಗಿಗಳನ್ನು ಪರೀಕ್ಷಿಸಿದರು.ಸಮಾಜದ ಕಾರ್ಯದರ್ಶಿ ಮಂಜುನಾಥ ಶೇಟ್, ಉಪಾಧ್ಯಕ್ಷ ಮಂಜುನಾಥ ದೈವಜ್ಞ, ಖಜಾಂಚಿ ಸತ್ಯನಾರಾಯಣ ರಾಯ್ಕರ್, ಅನಿಲ್ ವೆರ್ಣೆಕರ್, ದತ್ತಾತ್ರೇಯ ವೆರ್ಣೆಕರ್, ಮಂಜುನಾಥ ವೆರ್ಣೆಕರ್, ಬಾಲಚಂದ್ರ ರಾಯ್ಕರ್, ಡಾ.ಸೌಜನ್ಯಾ ಹಿರೇಮಠ ಮತ್ತು ಮಂಜುನಾಥ್ ಶಿಬಿರದಲ್ಲಿ ಪಾಲ್ಗೊಂಡಿದ್ದರು.