

ಹಾನಗಲ್ಲ: ಸಂಸ್ಕಾರಯುತ ಭಾರತಕ್ಕಾಗಿ ಮಕ್ಕಳು ಮಾತ್ರವಲ್ಲ, ಹಿರಿಯರಿಗೂ ಮಾರ್ಗದರ್ಶನದ ಅಗತ್ಯವಿದೆ. ಕುಟುಂಬದ ಹಿತಕ್ಕಾಗಿ ಒಂದಷ್ಟು ಕಾಲ ಮೀಸಲಿಡುವ ಪರಿಪಾಠ ಪ್ರತಿ ಮನೆಯದ್ದಾಗಬೇಕು ಎಂದು ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ನಾದಮಯ ಸಂಸ್ಕಾರ ಶಿಬಿರದ ಸಂಚಾಲಕ ಡಾ. ಕೆ. ಗಣಪತಿ ಭಟ್ ಹೇಳಿದರು.
ವೇದಿಕೆ ಮತ್ತು ಹೂವಮ್ಮ ಚಂಚಿ ಪ್ರತಿಷ್ಠಾನದಿಂದ ತಾಲೂಕಿನ ತಿಳವಳ್ಳಿಯ ಅಕ್ಷರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ 15ನೇ ನಾದಮಯ ಸಂಸ್ಕಾರ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಜೆಯಲ್ಲಿ ಮಕ್ಕಳನ್ನು ಸಂಭಾಳಿಸುವುದು ಕಷ್ಟ ಎನ್ನುವ ಪಾಲಕರ ಮನಸ್ಥಿತಿ ಇದೆ. ಇದೆ. ಆದರೆ ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕಾಗಿ, ಪ್ರತಿಭೆಯ ವಿಕಾಸಕ್ಕಾಗಿ, ಕತೃತ್ವ ಶಕ್ತಿಯನ್ನು ಇಮ್ಮಡಿಗೊಳಿಸಲು, ಜ್ಞಾನ ಕ್ಷಿತಿಜವನ್ನು ವಿಸ್ತರಿಸಲು ಸಕಾಲದಲ್ಲಿ ಮಕ್ಕಳಿಗೆ ಮಾರ್ಗದರ್ಶನ ಬೇಕಾಗಿದೆ. ರಜಾ ಕಾಲವನ್ನು ಕಳೆಯುವುದಲ್ಲ. ಸಂಸ್ಕಾರ ಶಿಬಿರಗಳನ್ನು ಯೋಜಿಸಿ ಯೋಚಿಸಿ ಮಕ್ಕಳಿಗೆ ಸದುಪಯೋಗ ಮಾಡಬೇಕಾಗಿದೆ. ಪಾಠ ಪಠ್ಯ ಹೊರತಾದ ಹತ್ತು ಹಲವು ಉತ್ತಮ ಸಂಗತಿಗಳನ್ನು ಕಲಿಯುವುದಕ್ಕಾಗಿ ಮೀಸಲಿಡಬೇಕಾಗಿದೆ. ನಾಳೆಗಾಗಿ ಇಂದೇ ಮಕ್ಕಳನ್ನು ಸಂಸ್ಕಾರಯುತರಾಗಿ ಬೆಳೆಸುವ ಸಂಕಲ್ಪ ಪಾಲಕರದಾಗಬೇಕಾಗಿದೆ. ಸಂಗೀತ ಮತ್ತು ಸಂಸ್ಕೃತ ಧರ್ಮ ಜಾತಿ ಮೀರಿದ ಜ್ಞಾನ ಸಂಗಮ. ಇವು ಸಂಸ್ಕಾರವಂತರಿಗೆ ಮೀಸಲು ಎಂದರು.
ಶಿಬಿರ ಉದ್ಘಾಟಿಸಿದ ಸಾಹಿತಿ ಮಾರುತಿ ಶಿಡ್ಲಾಪೂರ, ಅಕ್ಷರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥ ಪುಟ್ಟರಾಜ ಚಂಚಿ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಗಿರೀಶ ಪುರಾಣಿಮಠ, ರಾಧಾ ಸವಣೂರ, ರಾಣಿಬೆನ್ನೂರಿನ ಸಂಸ್ಕೃತ ಭಾರತಿ ಸಂಸ್ಥೆಯ ರತ್ನಾ ಬೈರಕ್ಕನವರ, ಪರಶುರಾಮ ಜಾಧವ, ಗಂಗಾಧರ ಇನಾಂದಾರ ಉಪಸ್ಥಿತರಿದ್ದರು.