

ವಿಜಯಪುರ: ಜಿಲ್ಲಾಡಳಿತ ಹಾಗೂ ಲಾಡ್ಲಿ ಫೌಂಡೇಶನ್ ವತಿಯಿಂದ ಸೆ.15 ರಂದು ಹಮ್ಮಿಕೊಂಡಿರುವ ‘ಸ್ವಚ್ಛತೆಗಾಗಿ ವಾಶೆಥಾನ್’ ಯಶಸ್ವಿಗೊಳಿಸಲು ಅಗತ್ಯ ಸಹಯೋಗ ನೀಡುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಂಬಂಧಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮತ್ತು ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸ್ವಚ್ಛತೆಗಾಗಿ ಕೈ ಜೋಡಿಸಿ ಘೋಷವಾಕ್ಯದೊಂದಿಗೆ 5 ಕಿಮೀ, 10 ಕಿಮೀ ಹಾಗೂ 21 ಕಿಮೀ ಓಟದ ವಾಶೆಥಾನ್ ಹಮ್ಮಿಕೊಂಡಿದ್ದು, ಮಕ್ಕಳಲ್ಲಿ ಸ್ವಚ್ಛತೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ನಗರದ ಗೋಳಗುಮ್ಮಟ ಆವರಣದಲ್ಲಿ ಆರಂಭಗೊಳ್ಳುವ ಈ ಕಾರ್ಯಕ್ರಮದ ಯಶಸ್ವಿಗೆ ಶಾಲಾ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಅಗ್ನಿಶಾಮಕ, ಪೊಲೀಸ್ ಇಲಾಖೆ ಅಧಿಕಾರಿಗಳು ಎಲ್ಲ ಅಗತ್ಯ ಕ್ರಮ ಕೈಗೊಂಡು ಸಹಕಾರ ಒದಗಿಸುವಂತೆ ಅವರು ಸೂಚನೆ ನೀಡಿದರು.
ಜಿಪಂ ಸಿಇಒ ರಿಷಿ ಆನಂದ, ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ ಸೌದಾಗರ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಬಸವರಾಜ ಕುಂಬಾರ, ನೆಹರು ಯುವ ಕೇಂದ್ರದ ಅಧಿಕಾರಿ ಡೋಂಗ್ರೆ, ಡಾ.ಜಾವೇದ ಜಮಾದಾರ, ಸರಿತಾ ಚಕ್ರಸಾಲಿ, ರಜನಿ ಜಂಬಣ್ಣಿ, ಸುರೇಶ ಬಿಜಾಪುರ ಮತ್ತಿತರರಿದ್ದರು.