ಸಾಧನಾ ಸಮಾವೇಶ ಯಶಸ್ವಿಗೊಳಿಸಿ

11M.D.R.3
ಮದ್ದೂರು ಪಟ್ಟಣದ ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ ಮಾತನಾಡಿದರು. ಕಾರ್ಯಕರ್ತರು, ಮುಖಂಡರು ಇದ್ದರು.
Published on

ಮದ್ದೂರು : ಜುಲೈ 28 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸುವ ಸಾಧನಾ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಪಟ್ಟಣದ ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಮಾವೇಶದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ತಾಲೂಕು ಮಟ್ಟದ ಕಾರ್ಯಕರ್ತರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತಿಹಾಸದಲ್ಲಿ ಮೊದಲ ಬಾರಿಗೆ 1300 ಕೋಟಿ ರೂ. ಗಳಿಗೂ ಹೆಚ್ಚು ಅನುದಾನ ತಂದಿದ್ದೇನೆ. ಅದಕ್ಕಾಗಿ ಸಾಧನಾ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು, ಇದು ನಮ್ಮ ತಾಲೂಕಿನ ಹೆಮ್ಮೆ. ಅಷ್ಟೇ ಅಲ್ಲದೇ ನೂತನ ನ್ಯಾಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿ, ಸಾರ್ವಜನಿಕ ಆಸ್ಪತ್ರೆ ಉನ್ನತೀಕರಣ ಕಾಮಗಾರಿ ಸೇರಿದಂತೆ ಹಲವಾರು ಕಾಮಗಾರಿಗಳು ಮುಂದಿನ ದಿನಗಳಲ್ಲಿ ನಡೆಯಲಿವೆ. ಇಂತಹ ಅಭೂತಪೂರ್ವ ಕಾರ್ಯಕ್ರಮವು ನಮ್ಮ ತಾಲೂಕಿನಲ್ಲಿ ನಡೆಯುತ್ತಿರುವುದು ನಮ್ಮ ಹೆಮ್ಮೆ. ಆದ್ದರಿಂದ ತಾಲೂಕಿನ ಸಾರ್ವಜನಿಕರು ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಈ ಸಮಾವೇಶವು ಅಚ್ಚುಕಟ್ಟಾಗಿ ನಡೆಯಲು ಹೆಚ್ಚು ಸಂಘಟಿತರಾಗಿ ಶ್ರಮವಹಿಸಬೇಕು ಎಂದ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹತ್ತಾರು ಸಚಿವರುಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಮಾತನಾಡಿ, ಮೈಸೂರು ಸಂಸ್ಥಾನದಲ್ಲಿ 1952ರಲ್ಲಿ ಚುನಾವಣಾ ರಾಜಕಾರಣ ಪ್ರಾರಂಭವಾದಾಗಿನಿಂದ ಮದ್ದೂರು ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು, ಸಚಿವರು ಒಟ್ಟಾಗಿ ಭೇಟಿ ನೀಡಿ ಇಷ್ಟೊಂದು ದೊಡ್ಡ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಇದೇ ಮೊದಲು ಎಂದು ಸಂತಸ ವ್ಯಕ್ತಪಡಿಸಿದರು.

ಶಾಸಕ ಕೆ.ಎಂ.ಉದಯ್ ಅವರು 2 ವರ್ಷಗಳ ಅವಧಿಯಲ್ಲಿ ಮದ್ದೂರು ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕಾವೇರಿ ನಿಗಮ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಸಣ್ಣ ನೀರಾವರಿ ನಿಗಮ, ಗ್ರಾಮೀಣ ಮತ್ತು ಪಂಚಾಯತಿ ಇಲಾಖೆ ಸೇರಿದಂತೆ ವಿವಿಧ ಮೂಲಗಳಿಂದ ಅನುದಾನ ತಂದಿರುವ ಅವರ ಪರಿಶ್ರಮ ಅಪಾರ ಎಂದರು.

ಇದು ಕೇವಲ ಸಾಧನಾ ಸಮಾವೇಶ ಮಾತ್ರವಲ್ಲದೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆಯೂ ಆಗಿದೆ. ಮದ್ದೂರಿನಲ್ಲಿ ಸ್ಪರ್ಧಿಸುವ ಎಲ್ಲ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದು, ಶಾಸಕ ಉದಯ್ ಅವರಿಗೆ ಶಕ್ತಿ ತುಂಬಬೇಕು ಎಂದು ದಿನೇಶ್ ಗೂಳಿಗೌಡ ಕರೆ ನೀಡಿದರು.

ರಾಜ್ಯದಲ್ಲಿ 100 ಬ್ಲಾಕ್ ಕಾಂಗ್ರೆಸ್ ಕಚೇರಿಗಳು ಸ್ವಂತ ಕಟ್ಟಡದಲ್ಲಿರಬೇಕೆಂಬ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಸಂಕಲ್ಪದ ಭಾಗವಾಗಿ, ಶಾಸಕ ಉದಯ್ ಅವರ ಕಾರ್ಯ ಶ್ಲಾಘನೀಯ ಎಂದು ಶಾಸಕ ದಿನೇಶ್ ಗೂಳಿಗೌಡ ಅಭಿನಂದಿಸಿದರು.

ರಾಜ್ಯದಲ್ಲಿ ಕೇವಲ 8 ಶಾಸಕರು ಮಾತ್ರ ತಮ್ಮ ಸ್ವಂತ ನಿವೇಶನವನ್ನು ಕಾಂಗ್ರೆಸ್ ಟ್ರಸ್ಟ್‌ಗೆ ಬರೆದುಕೊಟ್ಟಿದ್ದು, ಅವರಲ್ಲಿ ಉದಯಗೌಡರೂ ಒಬ್ಬರು. ಅವರು 6000 ಚದರ ಅಡಿ ವಿಸ್ತೀರ್ಣದ, ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿಯನ್ನು ಕೆಪಿಸಿಸಿಗೆ ಕೊಡುಗೆಯಾಗಿ ನೀಡಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ನಿವೇಶನವನ್ನು ಕಾಂಗ್ರೆಸ್ ಪಕ್ಷದ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ದಿನೇಶ್ ಗೂಳಿಗೌಡ ತಿಳಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಸುಮಾರು 140 ವರ್ಷಗಳ ಇತಿಹಾಸವಿದ್ದು, ರಾಜ್ಯದಲ್ಲಿ 480 ಬ್ಲಾಕ್ ಕಾಂಗ್ರೆಸ್ ಕಚೇರಿಗಳ ಪೈಕಿ ಬಹುತೇಕ ಬಾಡಿಗೆ ಕಟ್ಟಡದಲ್ಲಿವೆ. ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ 100 ಬ್ಲಾಕ್ ಕಾಂಗ್ರೆಸ್ ಕಚೇರಿಗಳನ್ನು ಸ್ವಂತ ಕಟ್ಟಡದಲ್ಲಿ ನಿರ್ಮಿಸುವಂತೆ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ಉದಯ್‌ಗೌಡ ಅವರ ಕೊಡುಗೆ ಅತ್ಯಂತ ಮಹತ್ವದ್ದು ಎಂದು ಹೇಳಿದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ತಾಲೂಕು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಮತಾ, ಯುವ ಘಟಕದ ಅಧ್ಯಕ್ಷ ಕೀರ್ತಿ ಗೌಡ, ಪುರಸಭಾಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಪ್ರಸನ್ನ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ತಿಮ್ಮದಾಸ್ ಗ್ರೂಪ್ಸ್ ಮಾಲೀಕ ಸಿ.ಟಿ.ಶಂಕರ್, ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಮುಖಂಡರಾದ ತಿಮ್ಮದಾಸ್ ಶಂಕರ್, ಕದಲೂರು ರಾಮಕೃಷ್ಣ, ಮುಖಂಡರಾದ ಬಸವರಾಜು, ಎಂ.ಡಿ.ರಾಮಲಿಂಗಯ್ಯ, ಇಂತಿಯಾಜ್‌ವುಲ್ಲಾ ಖಾನ್, ಅಜ್ಜಹಳ್ಳಿ ರಾಮಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net