ಕಲಿಕೆಗಾಗಿ ಸಿಗುವ ವೇದಿಕೆ ಸದ್ಬಳಕೆ ಮಾಡಿಕೊಳ್ಳಿ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಲಹೆ

3
Published on

ಮೈಸೂರು: ಕಲಿಕೆಗಾಗಿ ಸಿಗುವ ಯಾವುದೇ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳುವುದರ ಜತೆಗೆ ಕಲಿಕೆ ನಿರಂತರವಾಗಿರಬೇಕು ಎಂದು ಚಲನಚಿತ್ರ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.


ನಗರದ ಮೈಸೂರು ವಿಶ್ವವಿದ್ಯಾಲಯದ ಆವರಣದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ದಸರಾ ಚಲನಚಿತ್ರೋತ್ಸವ ಉಪ ಸಮಿತಿ ವತಿಯಿಂದ ಆಯೋಜಿಸಿದ್ದ ಚಿತ್ರ ನಿರ್ಮಾಣ ಪೂರ್ವ ತಯಾರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಕಲಿಕೆಗಾಗಿಯೇ ಬೆಂಗಳೂರಿನಲ್ಲಿ ಒಂದು ಪುಟ್ಟ ಸಿನಿಮಾ ಶಾಲೆಯನ್ನು ನಡೆಸುತ್ತಿದ್ದೇನೆ. ಅದರ ಕಷ್ಟ-ನಷ್ಟಗಳ ಬಗ್ಗೆ ನನಗೆ ಅರಿವಿದೆ. ನಿಸ್ಸಂಶಯವಾಗಿ 3 ದಿನಗಳಲ್ಲಿ ಕಲಿಯಲು ಸಾಧ್ಯವಿಲ್ಲ. ದಸರಾ ವಿಶೇಷವಾಗಿ ಹಲವಾರು ವೇದಿಕೆಗಳು ಸಿದ್ಧಗೊಳ್ಳುತ್ತವೆ. ಅಂತಹ ವೇದಿಕೆಗಳನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.


ಇಲ್ಲಿಗೆ ಬಂದರೆ ಯಾರೇ ಆಗಲಿ ಬರಿ ಕೈಯಲ್ಲಿ ಹೋಗಬಾರದು. ಏನನ್ನಾದರೂ ಕಲಿತು ಹಾಗೂ ಪಡೆದುಕೊಂಡು ಹೋಗಬೇಕು. ಕಾರಣ ಅರಿವು ಎಂಬುದು ತುಂಬಾ ಮುಖ್ಯ. ಪ್ರತಿಭೆ ವ್ಯಕ್ತಿಗತವಾದದ್ದು, ಅದನ್ನು ಯಾರೂ ಹೇಳಿಕೊಡಲು ಸಾಧ್ಯವಿಲ್ಲ. ಹೀಗಾಗಿ ಆಸಕ್ತಿಯಿಂದ ಕಲಿಯಬೇಕು ಹಾಗೂ ಸಮಾಜದ ಜತೆ ಒಡನಾಟವಿಟ್ಟುಕೊಳ್ಳುವುದರಿಂದ ಪ್ರತಿಭೆಯನ್ನು ಮೊನಚುಗೊಳಿಸಿಕೊಳ್ಳಬೇಕು ಎಂದು ಹೇಳಿದರು.


ನಮ್ಮಲ್ಲಿರುವ ದಟ್ಟವಾದ ಪ್ರತಿಭೆಯನ್ನು ಹೊರಗಿನಿಂದ ಯಾರೂ ಕಲಿಸಲು ಸಾಧ್ಯವಿಲ್ಲ. ಯಾರಿಂದಲೂ ಕೊಡಲು ಹಾಗೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರತಿಭೆ ಆಸ್ತಿ ಇದ್ದಹಾಗೆ. ಹೀಗಾಗಿ ಪ್ರತಿಭೆಯು ಸೃಜನಶೀಲ ಕಾರ್ಯದ ಮೂಲಕ ಹೊರಹೊಮ್ಮುತ್ತದೆ ಎಂದರು.


ಸಿನಿಮಾ ಎಂಬುದು ಇಂದು ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಸಾವಿರಾರು ವರ್ಷಗಳಿಂದ ಬಂದಿದ್ದ ಸಂಗೀತ, ಸಾಹಿತ್ಯ, ನಾಟಕಗಳನ್ನು ಮೊಟಕುಗೊಳಿಸಿ ಅದರ ಮೇಲೆ ನಿಂತು ವಿಜೃಂಭಿಸುತ್ತಿರುವ ಒಂದು ಪ್ರಭಾವಶಾಲಿ ಮಾಧ್ಯಮ. ಅದರ ಭಾಗಗವಾಗಿ ವೆಬ್ ಸಿರೀಸ್, ಡಾಕ್ಯುಮೆಂಟರಿ, ಕಿರುಚಿತ್ರಗಳಿವೆ. ಇವುಗಳಲ್ಲಿ ನೀವು ತೊಡಗಿಸಿಕೊಳ್ಳಲು ಹಾಗೂ ಬೆಳೆಯಲು ಸಾಕಷ್ಟು ಅವಕಾಶಗಳಿವೆ, ಅಷ್ಟೇ ಕಠಿಣವಾದ ಸ್ಪರ್ಧೆ ಇದೆ. ಹೀಗಾಗಿ ಇದರಲ್ಲಿ ಯಶಸ್ಸು ಪಡೆಯಲು ಬಯಸುವವರು ಶ್ರಮಪಡಬೇಕು ಎಂದರು.


ಸಿನಿಮಾಕ್ಕೆ ಅದರದ್ದೇ ಆದ ವ್ಯಾಕರಣ ಹಾಗೂ ಮಾನದಂಡಗಳಿವೆ. ಇಂತಹ ಕಡೆಗೆ ತರುಣ ವಿದ್ಯಾರ್ಥಿಗಳು, ಆಸಕ್ತರು ಗಮನ ಹರಿಸಬೇಕು. ಸಿನಿಮಾ ಎಂಬುದು ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪಕಲೆ ಹಾಗೂ ಚಿತ್ರಕಲೆಗಳಿಗಿಂತ ತುಂಬಾ ಭಿನ್ನವಾದದ್ದು. ಇದೊಂದು ಬಹುಪ್ರತಿಭೆಗಳನ್ನು ಬೆಳಕಿಗೆ ತರುವ ಮಾಧ್ಯಮವಾಗಿದೆ ಎಂದರು.


ದಸರಾ ಚಲನಚಿತ್ರೋತ್ಸವದ ವಿಶೇಷಾಧಿಕಾರಿ ಆರ್.ಶೇಷ ಮಾತನಾಡಿ, ಇಂತಹ ಕಾರ್ಯಾಗಾರವನ್ನು ಶಿಬಿರಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಅಲ್ಲದೆ ಚಲನಚಿತ್ರೋತ್ಸವವು ಶೀಘ್ರವಾಗಿ ನಡೆಲಿದ್ದು ಅದರ ಉದ್ಘಾಟನೆಯನ್ನು ಚಲನಚಿತ್ರ ನಟ ಶಿವರಾಜ್ ಕುಮಾರ್ ನೆರವೇರಿಸುವರು ಎಂದು ಮಾಹಿತಿ ನೀಡಿದರು.


ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿದೇಶಕ ಹಾಗೂ ಚಲನಚಿತ್ರ ಉಪಸಮಿತಿ ಕಾರ್ಯದರ್ಶಿ ಟಿ.ಕೆ.ಹರೀಶ್, ನಿರ್ದೇಶಕರಾದ ಮಂಸೋರೆ, ಪ್ರವೀಣ್ ಕೃಪಾಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net