

ಶೃಂಗೇರಿ: ಅಧುನಿಕ ಯುಗದಲ್ಲಿ ಹಲವು ಸವಾಲುಗಳು ನಮ್ಮ ಎದುರಿಗಿದ್ದು, ಪ್ರಶಿಕ್ಷಣಾರ್ಥಿಗಳು ತಾವು ಇರುವ ಕಾಲ ಘಟ್ಟವನ್ನು ಅರಿತು ಜೀವನದಲ್ಲಿ ಮುನ್ನಡೆಯುವ ಅಗತ್ಯವಿದೆ ಎಂದು ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನೂತನ ಮತ್ತು ಅಂತಿಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆಗೆ ಮುಕ್ತ ಅವಕಾಶಗಳಿವೆ. ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಜ್ಞಾನ ಎಂಬುದು ಪ್ರಜ್ಞೆಯ ಅರಿವು. ಅದರಕಡೆ ಯುವಮನಸ್ಸುಗಳ ಚಿತ್ತ ಹರಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗದ ನಿವೃತ್ತ ಪ್ರಾಧ್ಯಾಪಕ ನಟೇಶ್ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಆತ್ಮವಿಶ್ವಾಸ ಎಂಬುದು ಪ್ರಮುಖ ಘಟ್ಟ. ಉತ್ತಮ ಸಮಾಜ ರೂಪಿಸುವ ವೃತ್ತಿ ಶಿಕ್ಷಕ ವತ್ತಿ. ಯುವಜನತೆ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಮೈಮರೆತಿದ್ದಾರೆ. ದೇಶಪ್ರೇಮ ಮತ್ತು ವಿಶಾಲ ಮನೋಭಾವ ಕಡಿಮೆಯಾಗುತ್ತಿದೆ. ಶಿಕ್ಷಣ ಕೇವಲ ಬದುಕು ಕಟ್ಟಿಕೊಳ್ಳುವುದಕ್ಕೆ ಸೀಮಿತವಾಗಿರಬಾರದು. ಯುವ ಜನಾಂಗ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಹುಡುಗಾಟಕ್ಕಿಂತ ಹುಡುಕಾಟದ ಬದುಕು ಸಾರ್ಥಕ ಎಂದರು.
ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ, ವರಲಕ್ಷ್ಮೀ ಜಿ, ದರ್ಶಿನಿ ಸಂಯುಕ್ತ ಪ್ರೌಢಶಾಲೆ ಮುಖ್ಯಶಿಕ್ಷಕ ಕಿರಣ್ ಕುಮಾರ್, ಪ್ರಾಧ್ಯಾಪಕರಾದ ಅಮೃತ, ಶಂಕರ್ ನಾಯ್ಕ, ಧನ್ಯಕುಮಾರ್, ಭಾಗ್ಯಲಕ್ಷ್ಮೀ ಇದ್ದರು.