

ಶನಿವಾರಸಂತೆ: ಮುಖ್ಯಮಂತ್ರಿ ಸಿದ್ದಾರಾಮಯ್ಯ ಜ.25 ರಂದು ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೊಡ್ಲಿಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲಾಯಿತು.
ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಚುನಾವಣೆ ಸಂದರ್ಭ ನೀಡಿದ ಐದು ಗ್ಯಾರಂಟಿಗಳನ್ನು ನೀಡಿರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆದುಕೊಂಡಿದ್ದಾರೆ. ಈ ಐದು ಗ್ಯಾರೆಂಟಿಗಳು ಯಶಸ್ವಿಯಾಗಿದ್ದು ಪಕ್ಷಭೇದ, ಜಾತಿ ಧರ್ಮ ಭೇದವಿಲ್ಲದೆ ಅರ್ಹ ಫಲಾನುಭವಿಗಳು ಅನುಭವಿಸುತ್ತಿದ್ದಾರೆ ಎಂದರು.
ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಯಾವುದೇ ಗ್ರಾಮವನ್ನು ನಿರ್ಲಕ್ಷೃ ಮಾಡುವ ಪ್ರಶ್ನೆಯೇ ಇಲ್ಲ. ಕೊಡ್ಲಿಪೇಟೆ ಭಾಗದಲ್ಲಿ ನಮಗೆ ಹೆಚ್ಚು ಮತ ಹಾಕಿದ್ದಾರೆ. ಹಾಗೆಯೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರನ್ನು ಮನೆಗೆ ಕಳುಹಿಸಲು ಒಳ್ಳೆಯ ಅವಕಾಶ ಬಂದಿದೆ. ನಮ್ಮ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತಗಳು ಲಭಿಸುವಂತೆ ಶ್ರಮಿಸುವ ಮೂಲಕ ಪಕ್ಷದ ಗೆಲುವಿಗೆ ಕಾರ್ಯಕರ್ತರು ಕಾರಣೀಭೂತರಾಗುವಂತೆ ಮನವಿ ಮಾಡಿದರು.
ಮೈಸೂರಿನ ಕಾಂಗ್ರೆಸ್ ಮುಖಂಡ ಡಾ.ಶುಶ್ರೂತ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಜನಾರ್ಧನ್, ಕಾಂಗ್ರೆಸ್ ಪ್ರಮುಖರಾದ ಔರಂಗಜೇಬ್, ಮಲ್ಲೇಶ್ ಬೆಸೂರು, ಸುಲೇಮಾನ್ ಬ್ಯಾಡಗೊಟ್ಟ, ಬ್ಯಾಡಗೊಟ್ಟ ಗ್ರಾಪಂ ಅಧ್ಯಕ್ಷ ಮಹಮ್ಮದ್ ಹನೀಫ್, ಪ್ರಮುಖರಾದ ಪ್ರಸನ್ನ, ತೇಜ್‌ಕುಮಾರ್, ಪಾವನ, ವೇದಕುಮಾರ್, ಶೋಭಿತ್ ಗೌಡ, ವಹಾಬ್, ಧರ್ಮಣ್ಣ, ಜಯಪ್ಪ ಮುಂತಾದವರು ಹಾಜರಿದ್ದರು.