ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಲಿ

HLY KAGERI
Published on

ಹಳಿಯಾಳ: ವಿಕಸಿತ ಭಾರತದ ಸಂಕಲ್ಪ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಲ ತುಂಬುವಲ್ಲಿ ರಾಜ್ಯದ ಪ್ರತಿ ಬೂತ್ ಮಟ್ಟದಲ್ಲಿ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಜವಾಬ್ದಾರಿ ವಹಿಸಿ ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ವೃತ್ತದಲ್ಲಿ ಭಾನುವಾರ ಬಿಜೆಪಿ ಮಹಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು ರಾಜ್ಯ ಸರ್ಕಾರ ಹಗಲು ಭ್ರಷ್ಟಾಚಾರದಲ್ಲಿ ತೊಡಗಿದ್ದು, ದಿನಂಪ್ರತಿ ಹಗರಣಗಳಲ್ಲೇ ಕಾಲ ಕಳೆಯುತ್ತಾ ರಾಜ್ಯವನ್ನು ಕತ್ತಲೆಗೆ ತಳ್ಳಿದ್ದಲ್ಲದೆ, ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ದೂರಿದರು.

ಮುಡಾ ಹಗರಣದ ರೂವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕರಣ ತನಿಖೆಗೆ ರಾಜ್ಯಪಾಲರ ಅನುಮತಿ ಸರಿ ಇದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಆದರೂ ನೇರವಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೇ ಉದ್ಧಟತನ ಪ್ರದರ್ಶಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ರಾಜ್ಯ ಬಿಜೆಪಿ ಕಾರ್ಯಾಕಾರಿಣಿ ಸಮಿತಿ ಸದಸ್ಯ, ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಬಿಜೆಪಿಯು ದಾಖಲೆಯ 13 ಕೋಟಿ ಸದಸ್ಯರನ್ನು ಹೊಂದಿದ್ದು, ಇನ್ನೂ ಹೆಚ್ಚಿನ ಸದಸ್ಯರನ್ನು ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ. ಹಳಿಯಾಳದಲ್ಲಿ 9 ಸಾವಿರ ಬಿಜೆಪಿ ಸದಸ್ಯರು ಆಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ಸದಸ್ಯರು ಈ ಬಾರಿ ನೋಂದಣಿ ಮಾಡಿಸಿಕೊಳ್ಳಲಿದ್ದಾರೆ ಎಂದರು.

ಬಿಜೆಪಿ ಹಳಿಯಾಳ ಅಧ್ಯಕ್ಷ ವಿಠ್ಠಲ ಸಿದ್ದನ್ನವರ ಪ್ರಮುಖರಾದ ಮಂಗೇಶ ದೇಶಪಾಂಡೆ, ಸಂತೋಷ ಘಟಕಾಂಬಳೆ, ತಾನಾಜಿ ಪಟ್ಟೇಕರ, ಹನುಮಂತ ಚಿನಗಿನಕೊಪ್ಪ, ಬಸಣ್ಣ ಕುರುಬಗಟ್ಟಿ, ಉದಯ ಹುಲಿ, ಚಂದ್ರಕಾಂತ ಕಮ್ಮಾರ, ರಾಜೇಶ್ವರಿ ಹಿರೇಮಠ, ಚೂಡಪ್ಪ ಬೋಬಾಟಿ, ಸಂಗೀತಾ ಜಾವಳೇಕರ, ಶಕುಂತಲಾ ಜಾಧವ, ಇತರರಿದ್ದರು.

ಗೋವಾ-ರಾಮನಗರ ರಾಜ್ಯ ಹೆದ್ದಾರಿ ಬಗ್ಗೆ ಕೇಂದ್ರ ಸಚಿವ ನಿತಿನ ಗಡ್ಕರಿ ಅವರ ಗಮನಕ್ಕೆ ತಂದು ಆದಷ್ಟು ಬೇಗ ಅದನ್ನು ಸರಿಪಡಿಸಲಾಗುವುದು. ಹಳಿಯಾಳ ಸಕ್ಕರೆ ಕಾರ್ಖಾನೆ ಬಗ್ಗೆ ನಾನು ಇದುವರೆಗೆ ಯಾವ ಅಧಿಕಾರಿ ಜೊತೆ ಮಾತನಾಡಿಲ್ಲ. ಈಗ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಜೊತೆ ಮಾತನಾಡಿ ಅವರ ಸಭೆ ಕರೆದು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತರು ನಿಶ್ಚಿಂತೆಯಿಂದಿರಬೇಕು. ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೆಲ್ದರ್ಜೆಗೇರಿಸಲು ತಯಾರಿ ನಡೆಡಿದ್ದು, ಸಚಿವ ನಿತಿನ್ ಗಡ್ಕರಿ ಅವರ ಜತೆ ರ್ಚಚಿಸಲಾಗುವುದು. | ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net