

ಮೂಡಿಗೆರೆ: ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಸರ್ಕಾರ ಕಾಯಂಗೊಳಿಸಬೇಕು ಎಂದು ಬಣಕಲ್ ಗ್ರಾಮದ ಅನುದಾನಿತ ಪ್ರೌಢಶಾಲೆ ಶಿಕ್ಷಕ ಅಕ್ರಂ ಪಾಷ ಒತ್ತಾಯಿಸಿದ್ದಾರೆ.
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ವರ್ಷದಿಂದ ಕರ್ತವ್ಯ ನಿರ್ವಹಿಸುತಿದ್ದೇವೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ಬಲವರ್ಧನೆಗೆ ಹಾಗೂ ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಶಾಲೆ-ಕಾಲೇಜುಗಳನ್ನು ಉಳಿಸಲು ಅನುದಾನಿತ ಶಿಕ್ಷಣ ಸಂಸ್ಥೆಗಳು ಶ್ರಮಿಸುತ್ತಿದೆ. ಸರ್ಕಾರದಿಂದ ಶಿಕ್ಷಕರ ನೇಮಕಾತಿ ಇಲ್ಲದ ಕಾರಣ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶಿಕ್ಷಣ ಸಚಿವರು ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಹಿಂದೆಯೆ ಚಾಲನೆ ನೀಡಿದ್ದಾರೆ. ಆದರೆ ಗುತ್ತಿಗೆ ಆಧಾರದಲ್ಲಿ 10 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಬದುಕಿನಲ್ಲಿ ಕತ್ತಲೆ ಆವರಿಸಿದೆ ಎಂದು ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಡಿಮೆ ವೇತನಕ್ಕಾಗಿ ದುಡಿಯುತ್ತಿರುವ ಶಿಕ್ಷಕರು ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಕಷ್ಟ ಪಡಬೇಕಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಆಧಾರದ ಶಿಕ್ಷಕರಿಗೆ ಅನ್ಯಾಯವಾಗದಂತೆ ಶಿಕ್ಷಕರ ನೇಮಕಾತಿ ವೇಳೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ನೇಮಕಾತಿ ವೇಳೆ ಮೊದಲ ಆದ್ಯತೆ ನೀಡಬೇಕು, ವರ್ಷಕ್ಕೆ ಶೇ.3 ಕೃಪಾಂಕ ನೀಡಿ ಸೇವಾ ಅನುಭವ ಪರಿಗಣಿಸಬೇಕು, ಮೀಸಲಾತಿಯಿಂದ ವಿನಾಯಿತಿ ನೀಡಬೇಕು. ಆಫ್‌ಲೈನ್ ತಂತ್ರಾಂಶಗಳಲ್ಲಿ ನೇಮಕಾತಿ ಮಾಡಬೇಕು. ಈವರೆಗೆ ದುಡಿದ ಶಿಕ್ಷಕರಿಗೆ ವಯೋಮಿತಿ ಸಡಿಲಗೊಳಿಸಿ ವೃತ್ತಿ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.