

ಕಾರವಾರ: ಫೆಬ್ರವರಿ ಕೊನೆಯ ವಾರದಲ್ಲೇ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ಅದಕ್ಕೂ ಮುಂಚೇ ಎಲ್ಲ ಕಾಮಗಾರಿಳನ್ನು ಪ್ರಾರಂಭಿಸಿ, ಯಾವುದೇ ಅನುದಾನ ವಾಪಸಾಗದಂತೆ ನೋಡಿಕೊಳ್ಳಿ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಜಿಲ್ಲಾ ಮಟ್ಟದ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಟೆಂಡರ್ ಆದ ತಕ್ಷಣ ಕಾರ್ಯಾದೇಶ ನೀಡಿ, ಕಾಮಗಾರಿ ಪ್ರಾರಂಭಿಸಿ, ಗುದ್ದಲಿ ಪೂಜೆ ಮಾಡಬೇಕು ಎಂದು ಕಾಯುವುದು ಬೇಡ. ಬೇಕಾದರೆ, ಕಾಮಗಾರಿ ಮುಗಿದ ಬೇಲೆ ಅದರ ಉದ್ಘಾಟನೆ ಮಾಡೋಣ. ದೊಡ್ಡ ಕಾಮಗಾರಿಗಳಿದ್ದರೆ ನೋಡೋಣ ಅನುದಾನ ಯಾವುದೇ ಕಾರಣಕ್ಕೂ ವಾಪಸಾಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ನೂರಾರು ಕೋಟಿ ರೂ. ಕುಡಿಯುವ ನೀರಿನ ಕಾಮಗಾರಿ ಕೈಗೊಂಡು ಅದೇ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದು ಸಮಂಜಸ ಎನಿಸುವುದಿಲ್ಲ. ಹಾಗಾಗಿ ಗ್ರಾಮೀಣ ಹಾಗೂ ನಗರದ ಕುಡಿಯುವ ನೀರಿನ ಯೋಜನೆಗಳನ್ನು ಶೀಘ್ರದಲ್ಲಿ ಟೆಂಡರ್ ಕರೆಯಬೇಕು. ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಬೇಸಿಗೆ ತೀವ್ರತೆ ಹೆಚ್ಚಾಗುವ ಮೊದಲು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು ಎಂದು ಗ್ರಾಮೀಣ ಮತ್ತು ನಗರ ನೀರು ಸರಬರಾಜು ಇಲಾಖೆಗೆ ಸೂಚನೆ ನೀಡಿದರು.
ಗ್ಯಾರಂಟಿ ಜಾರಿಗೆ ಕ್ರಮ ವಹಿಸಿ
ಗ್ಯಾರಂಟಿ ಯೋಜನೆಗಳನ್ನು ಎಲ್ಲರಿಗೆ ತಲುಪಿಸಲು ಕ್ರಮ ವಹಿಸಬೇಕು. ಶೇ. 100 ರಷ್ಟು ಮನೆಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ತಲುಪಬೇಕು. ಗೃಹ ಲಕ್ಷ್ಮೀ ಯೋಜನೆಯಲ್ಲಿ ಶೇ.88 ರಷ್ಟು ಯಜಮಾನಿಯರ ನೋಂದಣಿಯಾಗಿದ್ದು, ಬಾಕಿ 19202 ಮಹಿಳೆಯರನ್ನೂ ಈ ವ್ಯಾಪ್ತಿಗೆ ತರಲು ಕ್ರಮ ವಹಿಸಬೇಕು. ಪ್ರತಿ ಮನೆಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಕಳಿಸಿ ನೋಂದಣಿಗೆ ಕ್ರಮ ವಹಿಸಿ ಎಂದರು. ಯುವ ನಿಧಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾದ ಪ್ರತಿ ವಿದ್ಯಾರ್ಥಿಗಳಿಗೆ ಪತ್ರ ಬರೆಯಿರಿ ಎಂದರು. ಬಿಡಾಡಿ ದನಗಳು, ನಾಯಿಗಳ ನಿಯಂತ್ರಣಕ್ಕೆ ಕ್ರಮ ವಹಿಸಿ ಎಂದು ಸೂಚಿಸಿದರು. ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್, ಎಡಿಸಿ ಪ್ರಕಾಶ ರಜಪೂತ, ಡಿಎಫ್‌ಒಗಳಾದ ರವಿಶಂಕರ್, ಪ್ರಶಾಂತ ಕೆ.ಸಿ.ಇತರರು ಇದ್ದರು.
ರಾಮನ ವಿರುದ್ಧ ಮಾತನಾಡಿದವರ ಮೇಲೆ ಕ್ರಮ
ಪ್ರಭು ಶ್ರೀ ರಾಮನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುವವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು. ಮಾಧ್ಯಮ ಪ್ರತಿನಿಽಗಳ ಜತೆ ಮಾತನಾಡಿದ ಅವರು, ಜಾಲತಾಣಗಳಲ್ಲಿ ಪೋಸ್ಟ್ ಹಾಕುವುದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದರು. ಶ್ರೀ ರಾಮನ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದರು.
ಸೋಲುವ ಭಯದಲ್ಲಿ ಸೇರಿಸಿಕೊಂಡಿದ್ದಾರೆ
ಬಿಜೆಪಿಯವರಿಗೆ ಲೋಕಸಭಾ ಚುನಾವಣೆಯನ್ನೂ ಸೋಲುವ ಭೀತಿ ಕಾಡಿದೆ. ಇದರಿಂದ ತಮ್ಮ ಪಕ್ಷ ಹಾಗೂ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಜಗದೀಶ ಶೆಟ್ಟರ್ ಅವರನ್ನು ಬಿಜೆಪಿಯವರು ವಾಪಸ್ ತಮ್ಮ ಪಕ್ಷಕ್ಕೆ ಕರೆಸಿಕೊಂಡಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ಲೇವಡಿ ಮಾಡಿದರು.
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ಬೇಜಾರಾಗಿದೆ ಎಂದು ಕಾಂಗ್ರೆಸ್ ಅವರನ್ನು ಎಂಎಲ್‌ಸಿ ಮಾಡಿತು. ಆದರೆ ಅವರು, ಅದನ್ನು ಉಳಿಸಿಕೊಂಡಿಲ್ಲ. ಬಿಜೆಪಿಗೆ ಹೋದವರೂ ವಾಪಸ್ ಕಾಂಗ್ರೆಸ್‌ಗೆ ಬರಲು ಸಿದ್ಧರಿದ್ದಾರೆ. ಆದರೆ, ನಮಗೆ ಗೆಲ್ಲುವ ವಿಶ್ವಾಸವಿದೆ. ಇದರಿಂದ ಬಿಜೆಪಿಯಿಂದ ಬರುವವರ ಸೇರ್ಪಡೆಗೆ ಬ್ರೇಕ್ ಹಾಕಿದ್ದೇವೆ ಎಂದರು.