ಆಹಾರ ಪ್ರಮಾಣ ಕಡಿತವಾಗದಂತೆ ನೋಡಿಕೊಳ್ಳಿ

Published on

ಶಿಗ್ಗಾಂವಿ: ಸರ್ಕಾರಿ ಆಸ್ಪತ್ರೆಗೆ ಗುತ್ತಿಗೆದಾರರು ಪೂರೈಸುವ ಆಹಾರ ಪ್ರಮಾಣ ಕಡಿತಗೊಳಿಸಿರುವ ಹಾಗೂ ಗುತ್ತಿಗೆ ನೌಕರರಿಗೆ ಸಂಬಳ ಕಡಿಮೆ ನೀಡುತ್ತಿರುವ ಕುರಿತು ದೂರು ಕೇಳಿಬರುತ್ತಿವೆ. ಇಂತಹ ಸಮಸ್ಯೆ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯಾಸೀರಖಾನ್ ಪಠಾಣ ಸೂಚನೆ ನೀಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಆಸ್ಪತ್ರೆಗೆ ಈಗಾಗಲೇ ಹೊಸದಾಗಿ ನಾಲ್ವರು ವೈದ್ಯರು ನಿಯೋಜನೆಗೊಂಡಿದ್ದು, ಇನ್ನೂ ನಾಲ್ವರು ವೈದ್ಯರ ನೇಮಕಾತಿ ಅವಶ್ಯವಿದೆ. ಆರೋಗ್ಯ ಸಚಿವರೊಂದಿಗೆ ರ್ಚಚಿಸಿ, ತಕ್ಷಣ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರ ಮತ್ತು ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರ ಶ್ರಮ ಮುಖ್ಯವಾದದ್ದು. ಅವರಿಗೆ ಸರಿಯಾದ ಸಮಯಕ್ಕೆ ಸಂಬಳ ಸಿಗುವಂತೆ ಸಂಬಂಧಪಟ್ಟ ಏಜೆನ್ಸಿ ಅವರೊಂದಿಗೆ ರ್ಚಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಿಲ್ ಪಾವತಿಗೆ ಸೂಚನೆ: ಬಿಲ್ ಬಾಕಿ ಹಣ ಕೇಳಿದರೆ ಆಸ್ಪತ್ರೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆಸ್ಪತ್ರೆಗೆ ಆಹಾರ ಪೂರೈಕೆ ಮಾಡುತ್ತಿರುವ ಕ್ಯಾಂಟೀನ್ ಮಾಲೀಕರಾದ ರೇಣುಕಾ ಉಪಳೆ ಅವರು ಶಾಸಕರ ಎದುರು ಅಳಲು ತೋಡಿಕೊಂಡರು. ಆಗ, ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಶಾಸಕ, ತಕ್ಷಣದಲ್ಲಿ ಬಾಕಿ ಹಣ ಪಾವತಿಸಲು ಸೂಚಿಸಿದರು.

ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಜಯಾನಂದ, ತಾಲೂಕು ವೈದ್ಯಾಧಿಕಾರಿ ಡಾ. ಸತೀಶ ಎ.ಆರ್., ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನಯ್ಯ, ತಜ್ಞ ವೈದ್ಯರಾದ ಡಾ. ಮಹೇಶ ಜಗದವರ, ಡಾ. ರಾಜೇಶ್ವರಿ ಡಾ. ತಬಸುಮ್ ಆಸ್ಪತ್ರೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net