

ಮೈಸೂರು: ಮತದಾನ ಕೇಂದ್ರಗಳಲ್ಲಿ ಅಂಗವಿಕಲ ಮತದಾರರಿಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ.ಗಾಯತ್ರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸ್ವೀಪ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಮತ ಚಲಾಯಿಸಲು ಮತ ಕೇಂದ್ರಗಳಿಗೆ ಬರುವ ಅಂಗವಿಕಲ ಮತದಾರರಿಗೆ ಯಾವುದೇ ತೊಂದರೆಯಾಗದ ರೀತಿ ನೋಡಿಕೊಳ್ಳಬೇಕು. ಮೆಟ್ಟಿಲು ಇರುವ ಮತ ಕೇಂದ್ರಗಳಲ್ಲಿ ಅಂಗವಿಕಲರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಳಿಜಾರು ಅಥವಾ ವ್ಹೀಲ್‌ಚೇರ್‌ಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಅಂಗವಿಕಲ ಸ್ನೇಹಿ ಮತಕೇಂದ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ. ಪ್ರಮುಖವಾಗಿ ಮತದಾನದಿಂದ ದೂರ ಉಳಿಯುವ ಸುಶಿಕ್ಷಿತರ ವಾಸತಾಣವಾದ ಬಡಾವಣೆ, ಅಪಾರ್ಟ್‌ಮೆಂಟ್‌ಗಳಲ್ಲಿ ಮತದಾನದ ಅರಿವು ಮೂಡಿಸಿ. ಪ್ರವಾಸಿ ತಾಣಗಳಾದ ಮೃಗಾಲಯ, ಅರಮನೆ, ದೇವರಾಜ ಮಾರುಕಟ್ಟೆ, ರೈಲು ನಿಲ್ದಾಣ ಹಾಗೂ ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು ಸೇರಿದಂತೆ ಇತರೆ ಅಧಿಕಾರಿಗಳಿದ್ದರು.