ಕ್ರೀಡೆಯನ್ನು ಜೀವನ ಶೈಲಿಯಾಗಿಸಿಕೊಳ್ಳಿ

30 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ರೀಡೆಯನ್ನು ಜೀವನ ಶೈಲಿಯಾಗಿ ಅಳವಡಿಸಿಕೊಂಡರೆ ಉತ್ತಮ ಸ್ವಾಸ್ಥ್ಯ ಹೊಂದಲು ಸಾಧ್ಯ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಎ. ಚನ್ನಪ್ಪ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗವು ರಾಷ್ಟ್ರೀಯ ಕ್ರೀಡಾ ದಿನ ನಿಮಿತ್ತ ಕವಿವಿ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮೇಜರ್​ ಧ್ಯಾನಚಂದ್​ ಟ್ರೋಫಿ ಕ್ರೀಡಾಕೂಟದ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಮೇಜರ ಧ್ಯಾನಚಂದ ಸ್ವಂತ ಪ್ರಯತ್ನ ಮತ್ತು ಪರಿಶ್ರಮದಿಂದ ಹಾಕಿ ಆಟವನ್ನು ಸಿದ್ಧಿಸಿಕೊಂಡಿದ್ದರು. ಹೀಗಾಗಿ ಅವರು ಹಾಕಿಯಲ್ಲಿ ಅಗ್ರಗಣ್ಯರಾಗಿ ಹೊರಹೊಮ್ಮಿದ್ದರು. ವಿದ್ಯಾರ್ಥಿಗಳು ಯಾವುದೇ ಆಟವಾಡುವಾಗ ಮತ್ತು ಕೆಲಸ ಮಾಡುವಾಗ ಅದನ್ನು ಪ್ರೀತಿಯಿಂದ ಶ್ರದ್ಧೆವಹಿಸಿ ಮಾಡಿದರೆ ಅದು ಸಿದ್ಧಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಬಿ.ಎಂ. ಪಾಟೀಲ ಮಾತನಾಡಿ, ಮೇಜರ್​ ಧ್ಯಾನಚಂದ್​ ದೇಶಕ್ಕೆ ಬಹಳ ಉತ್ತಮ ಕೊಡುಗೆ ಕೊಟ್ಟಿದ್ದಾರೆ. ಮೂರು ಬಂಗಾರದ ಪದಕಗಳ ರೂವಾರಿ ಧ್ಯಾನಚಂದ್​ ಅವರು ಬೆಳಗ್ಗೆ ತಮ್ಮ ಸೈನಿಕ ವೃತ್ತಿ ನಿರ್ವಹಿಸಿ ರಾತ್ರಿ ಚಂದ್ರನ ಬೆಳಕಲ್ಲಿ ಹಾಕಿಯ ತಯಾರಿ ನಡೆಸುತ್ತಿದ್ದರು. ಅದಕ್ಕಾಗಿ ಅವರ ಹೆಸರಿನ ಜೊತೆಗೆ ಚಂದ್​ ಎಂಬವುದು ಸೇರಿಕೊಂಡಿತು ಎಂದರು.
ಕ್ರೀಡಾಕೂಟದ ವಾಲಿಬಾಲ್​ ಪಂದ್ಯದಲ್ಲಿ ಕವಿವಿ ಎಂಬಿಎ ವಿಭಾಗದ ತಂಡ ಪ್ರಥಮ, ಕವಿವಿ ಕಂಪ್ಯೂಟರ ಸೈನ್ಸ್​ ವಿಭಾಗದ ತಂಡ ದ್ವೀತಿಯ, ವಿದ್ಯಾರ್ಥಿನಿಯರ ಥ್ರೋಬಾಲ್​ ಪಂದ್ಯದಲ್ಲಿ ವಾಣಿಜ್ಯ ವಿಭಾಗದ ತಂಡ ಪ್ರಥಮ ಸ್ಥಾನ, ಸೂಕ್ಷ್ಮ ಜೀವ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ತಂಡ ದ್ವೀತಿಯ ಸ್ಥಾನ ಪಡೆದವು.
ಪ್ರೊ. ರಾಮಾಂಜಯಲು, ಪ್ರೊ. ಆರ್​.ಎಲ್​. ಹೈದ್ರಾಬಾದ್​, ಪ್ರೊ. ಎ.ಎನ್​. ತಾಮ್ರಗುಂಡಿ, ಪ್ರೊ. ಕಿರಣಕುಮಾರ ಬನ್ನಿಗೋಳ, ಪ್ರೊ. ಅನಿತಾ ಹಾಲುಮತ, ಎಂ.ಜೆ. ತಿಮ್ಮಾಪುರ, ನಾಗೇಶ ಕಾಂಬಳೆ, ಇತರರು ಇದ್ದರು.
ಶಿವು ಮರೆನ್ನವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net