ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅರಿವು ಮೂಡಿಸಿ

MDK02
Published on

ಮಡಿಕೇರಿ: ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಮಹತ್ವವನ್ನು ಪರಿಣಾಮಕಾರಿ ಮಾಗದರ್ಶನದೊಂದಿಗೆ ತಿಳಿಸಿದರೆ ಹಳ್ಳಿಯ ಮಕ್ಕಳೂ ಉನ್ನತ ಮಟ್ಟದ ಹುದ್ದೆಗಳನ್ನು ಪಡೆಯಲು ಸುಲಭಸಾಧ್ಯ ಎಂದು ಪಾಂಡಿಚೇರಿ ಸರ್ಕಾರದ ಆರೋಗ್ಯ ಮತ್ತು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್.ಬಾಬು ಸಲಹೆ ನೀಡಿದರು.


ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಹಳೇ ವಿದ್ಯಾರ್ಥಿಯಾಗಿದ್ದೇನೆ. ಗ್ರಾಮೀಣ ಸಂಸ್ಥೆಯಲ್ಲಿ ಓದುವ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸದ ಬಗ್ಗೆ ಅರಿವು ಮೂಡಿಸಿ ಸೂಕ್ತ ತರಬೇತಿಯನ್ನು ನೀಡಿದರೆ ಉನ್ನತ ಮಟ್ಟದ ಹುದ್ದೆಗಳನ್ನು ಪಡೆಯಬಹುದು ಎಂಬುದಕ್ಕೆ ತಾನೇ ಸಾಕ್ಷಿಯಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕರ್ನಲ್ ಬಿ.ಜಿ.ವಿ.ಕುಮಾರ್, ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಿ ಇದೇ ವೇದಿಕೆಗೆ ಅತಿಥಿಗಳಾಗಿ ಆಗಮಿಸಿದರೆ ಇದಕ್ಕಿಂತ ಸಾರ್ಥಕ್ಯ ಮತ್ತೊಂದಿಲ್ಲ ಎಂದರು.


ಬಾಬುರವರಿಗೆ ಡಿ.ಚೆನ್ನಮ್ಮ ಪ.ಪೂ.ಕಾಲೇಜಿನಲ್ಲಿ ಪಾಠ ಮಾಡಿದ್ದ ನಿವೃತ್ತ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಗುರು ಶಿಷ್ಯರ ಸಮಾಗಮವು ಒಂದೇ ವೇದಿಕೆಯಲ್ಲಿ ನಡೆಯಿತು. ಈ ಸಂಸ್ಥೆಯ ವಿದ್ಯಾರ್ಥಿ ಕೆ.ಎ.ಎಸ್ ಅಧಿಕಾರಿಯಾಗಿ ನಿವೃತ್ತಿಗೊಂಡಿರುವ ಬಿ.ಎ.ನಾಣಿಯಪ್ಪ ಹಾಜರಿದ್ದು ಸಂಸ್ಥೆಯ ಬಗ್ಗೆ ಶ್ಲಾಘಿಸಿದರು. ವಾರ್ಷಿಕ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಂದ ಎನ್‌ಸಿಸಿ ಪೆರೇಡ್, ಪಿರಮಿಡ್, ಉಮ್ಮತ್ತಾಟ್ ಹಾಗೂ ಸಾಮೂಹಿಕ ಅಂಗ ಸಾಧನೆ ಪ್ರದರ್ಶಿತವಾದವು. ಪ್ರಾಂಶುಪಾಲರಾದ ಮಂದಪ್ಪ ಸಂಸ್ಥೆಯ ವರದಿ ವಾಚಿಸಿದರು.


ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಮುದ್ದಪ್ಪ, ಮೋಹನ್ ಬೋಜಮ್ಮ, ಹಿರಿಯ ದಾನಿ ಮರವಂಡ ಗಂಗಮ್ಮ ಗಣಪತಿ, ಮುಖ್ಯ ಶಿಕ್ಷಕಿ ರೇವತಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಕವಾಗಿ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net