

ಹಾಸನ: ಯಾವುದೇ ರೋಗ ಲಕ್ಷಣ ಇಲ್ಲದ ಕೋವಿಡ್-19 ಸೋಂಕಿತರನ್ನು ಅವರವರ ಮನೆಗಳಲ್ಲಿಯೇ ಕ್ವಾರಂಟೈನ್ ಮಾಡಬೇಕೆಂದು ನಿರ್ದೇಶನ ಇರುವುದರಿಂದ, ಮನೆ ಪಕ್ಕದ ನಿವಾಸಿಗಳಿಗೆ ಸೂಕ್ತ ಮಾಹಿತಿ ಹಾಗೂ ಅನುಸರಿಸಬೇಕಾದ ಅಗತ್ಯ ಕ್ರಮಗಳ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೌಮ್ಯ ರೋಗ ಲಕ್ಷಣಗಳಿರುವ ಸೋಂಕಿತರನ್ನು ಅವರ ಮನೆಯಲ್ಲಿಯೇ ಕ್ವಾರಂಟೈನ್ ಮಾಡಬೇಕಾಗಿರುವುದರಿಂದ ಅಧಿಕಾರಿಗಳು ಭೇಟಿ ನೀಡಿ, ಪ್ರತ್ಯೇಕ ಕೊಠಡಿ ಹಾಗೂ ಶೌಚಗೃಹದ ವ್ಯವಸ್ಥೆ ಇರುವ ಕುರಿತು ಪರಿಶೀಲಿಸಬೇಕು. ಈ ವ್ಯವಸ್ಥೆ ಇದ್ದವರನ್ನು ಮಾತ್ರ ಹೋಮ್ ಕ್ವಾರಂಟೈನ್‌ಗೆ ಶಿಫಾರಸು ಮಾಡಬೇಕು ಎಂದರು.
ಹೋಂ ಕ್ವಾರಂಟೈನ್ ಮಾಡಲಾದ ಸೋಂಕಿತರ ಸಂಪೂರ್ಣ ವಿವರಗಳನ್ನು ಗೂಗಲ್ ಸ್ಪ್ರೆಡ್ ಶೀಟ್‌ನಲ್ಲಿ ಅಪ್‌ಲೋಡ್ ಮಾಡಿ ಪ್ರತಿದಿನದ ವರದಿಯನ್ನು ಅದರಲ್ಲಿ ಅಪ್‌ಡೇಟ್ ಮಾಡಬೇಕು. ಪ್ರತಿ ದಿನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ಅಡಿ ಕಾರ್ಯ ನಿರ್ವಹಿಸುವ ವೈದ್ಯರು, ಪ್ರೌಢಶಾಲಾ ಶಿಕ್ಷಕರು, ಕಂದಾಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆ ಹಾಗೂ ಪೋಲೀಸ್ ಸಿಬ್ಬಂದಿಯನ್ನೊಳಗೊಂಡ 6 ವಿಶೇಷ ತಂಡಗಳನ್ನು ರಚಿಸಬೇಕು. ಇವು ತಾಲೂಕು ಆರೋಗ್ಯ ಅಧಿಕಾರಿಯ ಸೂಚನೆಯಂತೆ ಕಾರ್ಯ ನಿರ್ವಹಿಸಬೇಕು. ಅದರಂತೆ ಈ ತಂಡಗಳನ್ನು ಪ್ರಥಮ ಸಂಪರ್ಕಿತರನ್ನು ಪತ್ತೆ ಹಚ್ಚುವುದು ಹಾಗೂ ಕ್ವಾರಂಟೈನ್‌ನಲ್ಲಿರುವವರ ಬಗ್ಗೆ ನಿಗಾ ವಹಿಸಲು ನಿಯೋಜಿಸಿ ಎಂದು ಸೂಚಿಸಿದರು.
ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ: ಕೋವಿಡ್-19 ವ್ಯಾಪಕತೆ ಹೆಚ್ಚಾಗುತ್ತಿರುವುದರಿಂದ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಜು. 9ರ ಒಳಗೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತರ ತಪಾಸಣೆಗೆಂದು ಹೆಚ್ಚುವರಿ ಕೊಠಡಿಗಳನ್ನು ಮೀಸಲಿಡುವಂತೆ ನಿರ್ದೇಶನ ನೀಡಬೇಕು. ಖಾಸಗಿ ಆಸ್ಪತ್ರೆ ಹಾಗೂ ಶಾಲೆಗಳಲ್ಲಿರುವ ಹೆಚ್ಚುವರಿ ಆಂಬುಲೆನ್ಸ್ ಹಾಗೂ ವಾಹನಗಳನ್ನು ಕೋವಿಡ್-19 ಪರಿಕ್ಷಾ ಘಟಕವನ್ನಾಗಿ ಮಾಡಲು ಬಳಸಿಕೊಳ್ಳಿ ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ ಹಾಗೂ ಇತರರಿದ್ದರು.
ಸಿಬ್ಬಂದಿಗೆ ತಲಾ 5 ಸಾವಿರ ರೂ.: ಕರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಕರೆದೊಯ್ಯುವ ನಾಲ್ವರು ನೌಕರರಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ವೈಯಕ್ತಿಕವಾಗಿ ತಲಾ 5 ಸಾವಿರ ರೂ.ನಂತೆ 20 ಸಾವಿರ ರೂ. ನೀಡಿದರು.
ಕಷ್ಟದ ಕೆಲಸವನ್ನು ಮಾಡುತ್ತಿರುವ ನೌಕರರನ್ನು ಗೌರವಿಸುವುದು ನಮ್ಮ ಕರ್ತವ್ಯ. ಅವರ ಕಾರ್ಯ ಕ್ಷಮತೆಯನ್ನು ಎಲ್ಲರೂ ಮೆಚ್ಚಬೇಕು ಎಂದು ಡಿಎಚ್‌ಎ ಡಾ. ಕೆ.ಎಂ.ಸತೀಶ್‌ಕುಮಾರ್ ಅವರಿಗೆ ಹಣ ನೀಡಿದರು.