ಜನರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳಿ

27 ckm 9
ಚಿಕ್ಕಮಗಳೂರಿನ ನಗರಸಭೆ ಸಭಾಂಗಣದಲ್ಲಿ ಐದನೇ ರಾಜ್ಯ ಹಣಕಾಸು ಆಯೋಗದ ಸಭೆಯಲ್ಲಿ ಆಯೋಗದ ಅಧ್ಯಕ್ಷ ಡಾ. ಸಿ.ನಾರಾಯಣಸ್ವಾಮಿ ಮಾತನಾಡಿದರು. ವರಸಿದ್ಧಿ ವೇಣುಗೋಪಾಲ್, ಬಸವರಾಜ್, ಆರ್.ಎಸ್ ಫೊಂಡೆ, ಮಹಮ್ಮದ್ ಸನಾಉಲ್ಲಾ, ಕೆಂಪೇಗೌಡ ಎಂ.ಕೆ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಜಿಲ್ಲೆಯು ಪ್ರವಾಸೋದ್ಯಮಕ್ಕೆ ಹೆಸರಾಂತವಾಗಿದ್ದು, ಪ್ರೇಕ್ಷಣೀಯ ಸ್ಥಳಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಆಧಾಯ ಕ್ರೋಡಿಕರಿಸಿ ಜನರ ತೆರಿಗೆ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ನಗರದ ಅಭಿವೃದ್ಧಿಗೆ ಮುಂದಾಗಿ ಎಂದು ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ. ಸಿ.ನಾರಾಯಣಸ್ವಾಮಿ ತಿಳಿಸಿದರು.

ನಗರದ ನಗರಸಭೆ ಸಭಾಂಗಣದಲ್ಲಿ ನಡೆದ ಐದನೇ ರಾಜ್ಯ ಹಣಕಾಸು ಆಯೋಗದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮುಳ್ಳಯ್ಯನಗಿರಿ ಪ್ರದೇಶಕ್ಕೆ ದೇಶದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿನ ಪ್ರಕೃತಿ ಸೌಂದರ್ಯ ವೈಶಿಷ್ಟತೆಯನ್ನು ಪಡೆದಿದೆ. ಇದನ್ನು ಆಧಾರವಾಗಿಟ್ಟುಕೊಂಡು ಪ್ರವಾಸಿ ತಾಣಗಳನ್ನು ಇನ್ನಷ್ಟ ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಮೂಲಕ ತೆರಿಗೆಯನ್ನು ಕ್ರೋಡಿಕರಿಸಿಕೊಂಡು ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿದರು.
ನಗರಸಭೆ ಆಯುಕ್ತ ಬಸವರಾಜ್ ನಗರದ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡಿ, ನಗರದಲ್ಲಿ ಒಟ್ಟು ೩೫ ವಾರ್ಡ್ ಗಳಿದ್ದು ಪ್ರತಿ ವಾರ್ಡ್ಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಎರಡು ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆ. ಪ್ರತಿನಿತ್ಯ ನೀರು ಹರಿಸಲು ಜಾಕ್ವೆಲ್ ಸಮಸ್ಯೆ ಇದ್ದು, ಇದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಹೇಳಿದರು.
ನಗರದ ೧೪ ಸ್ಲಂಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅನೇಕ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುತ್ತಿದೆ. ತೆರಿಗೆ ವಸೂಲಾತಿಗೆ ಬಿಲ್ ಕಲೆಕ್ಟರ್ ಸಿಬ್ಬಂದಿ ಕೊರತೆ ಇದ್ದು, ಖಾಲಿರುವ ಹುದ್ದೆಗಳಿಗೆ ಸಿಬ್ಬಂದಿ ನೇಮಿಸಿಕೊಂಡಲ್ಲಿ ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ಒದಗಿಸಿ ತೆರಿಗೆಯನ್ನು ನಿರ್ದಿಷ್ಟ ಸಮಯದಲ್ಲಿ ಕ್ರೋಡಿಕರಿಸಬಹುದು ಎಂದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರಸಭೆಯಲ್ಲಿ ಆದಾಯ ಕ್ರೋಡಿಕರಣಕ್ಕೆ ಅನೇಕ ಮೂಲಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಮಳಿಗೆಗಳು, ನೀರಿನ ತೆರಿಗೆ, ಆಸ್ತಿ ತೆರಿಗೆ, ಜಾಹೀರಾತು, ಉದ್ದಿಮೆ ಪರವಾನಗಿ ಸೇರಿದಂತೆ ಅನೇಕ ಮೂಲಗಳಿಂದ ತೆರಿಗೆ ಹಣವನ್ನು ಕ್ರೋಡಿಕರಿಸಲಾಗುತ್ತಿದೆ. ವಾರ್ಡ್ ಗಳ ಸ್ವಚ್ಛತೆ ಹಾಗೂ ವಿವಿಧ ಕಾರ್ಯಗಳಿಗೆ ಪೌರಕಾರ್ಮಿಕರ ಕೊರತೆ ಇದೆ. ಪೌರಕಾರ್ಮಿಕರ ನೇಮಕವಾದಲ್ಲಿ ನಗರ ಇನ್ನಷ್ಟು ಸ್ವಚ್ಛ ಹಾಗು ವ್ಯವಸ್ಥಿತವಾಗಿರಲಿದೆ ಎಂದು ಹೇಳಿದರು.
ಸಭೆಯಲ್ಲಿ ಐದನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ಆರ್.ಎಸ್ ಫೊಂಡೆ, ಮಹಮ್ಮದ್ ಸನಾಉಲ್ಲಾ ಹಾಗೂ ಸಮಲೋಚಕರಾದ ಕೆಂಪೇಗೌಡ ಎಂ.ಕೆ, ನಗರಸಭೆ ಯೋಜನಾ ನಿರ್ದೇಶಕಿ ಚಂದ್ರಮ್ಮ, ನಗರಸಭೆ ಉಪಾಧ್ಯಕ್ಷ ಚನ್ನಕೇಶವ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net