ಸರ್ಕಾರದ ಸೌಲಭ್ಯ ಸರಿಯಾಗಿ ಬಳಸಿಕೊಳ್ಳಿ: ನಾಗೇಶ್ ಕುಂದಲ್ಪಾಡಿ

24adarshkdga3
Published on

ಮಡಿಕೇರಿ: ಸರ್ಕಾರವು ಭೂಮಿ ಇಲ್ಲದ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ಸಾಗುವಳಿ ಚೀಟಿ ಹಾಗೂ ನಿವೇಶನ ಹಕ್ಕುಪತ್ರ ನೀಡುತ್ತಿದ್ದು ಈ ಸೌಲಭ್ಯ ಪಡೆದು ಬಡವರು ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು ಮಡಿಕೇರಿ ತಾಲೂಕಿನ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಹೇಳಿದರು.


ನಗರದ ತಹಶೀಲ್ದಾರ್‌ರವರ ಕಚೇರಿ ಸಭಾಂಗಣದಲ್ಲ ಸಾಗುವಳಿ ಚೀಟಿ ಹಾಗೂ ನಿವೇಶನ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಾಗುವಳಿ ಚೀಟಿ ಅಥವಾ ನಿವೇಶನ ಹಕ್ಕುಪತ್ರವನ್ನು ಪರಬಾರೆ ಮಾಡಬಾರದು ಎಂದು ಸಲಹೆ ಮಾಡಿದರು.


ಶಾಸಕರ ಮಾರ್ಗದರ್ಶನದಂತೆ ಹಕ್ಕುಪತ್ರ ವಿತರಿಸಲಾಗಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಆಗಬೇಕಿರುವ ಕಾರ್ಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದೆ. ಸಾಗುವಳಿ ಚೀಟಿ ಪಡೆದಿರುವುದರಿಂದ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಿದರು.


ಸದಸ್ಯ ಸುಬ್ರಹ್ಮಣ್ಯ ಉಪಾಧ್ಯಾಯ ಮಾತನಾಡಿ, ಅಕ್ರಮ ಸಕ್ರಮ ಯೋಜನೆಯಡಿ ಬಡ ಜನರಿಗೆ ಭೂಮಿಯ ಸಾಗುವಳಿ ಚೀಟಿ ಹಾಗೂ ನಿವೇಶನ ಹಕ್ಕುಪತ್ರ ನೀಡಲಾಗುತ್ತಿದ್ದು, ಇದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ೨೨ ಜನರಿಗೆ ಸಾಗುವಳಿ ಚೀಟಿ ಹಾಗೂ ೧೮ ಜನರಿಗೆ ನಿವೇಶನ ಹಕ್ಕು ಪತ್ರವನ್ನು ವಿತರಿಸಿದರು. ತಹಶೀಲ್ದಾರ್ ಪಿ.ಎಸ್.ಮಹೇಶ್, ಶಿರಸ್ತೆದಾರ್ ವೆಂಕಟೇಶ್, ರವಿಕುಮಾರ್, ಶಿವಣ್ಣವರ್, ಕೆ.ಕೆ.ರಮೇಶ್, ನಿತಿನ್ ಪ್ರಸಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net