ವೈಯ್ಯಕ್ತಿಕ ಸ್ವಚ್ಛತೆ ಹೆಚ್ಚಿನ ಆದ್ಯತೆ ನೀಡಿ

29 nrp 2
ಎನ್.ಆರ್.ಪುರದ ಅಂಗನವಾಡಿ ಕೇಂದ್ರದಲ್ಲಿ ನಡೆದ ಋತುಸ್ರಾವ ನೈರ್ಮಲ್ಯ ನಿರ್ವಹಣಾ ಕಾರ್ಯಕ್ರಮವನ್ನು ಪಪಂ. ಸ್ಥಾಯಿ ಸಮಿತಿ ಅಧ್ಯ್ಕಷ ಪ್ರಶಾಂತ್.ಎಲ್.ಶೆಟ್ಟಿ ಉದ್ಘಾಟಿಸಿದರು. ದಾಕ್ಷಾಯಿಣಿಬಾಯಿ,ಸುಪ್ರಿತಾ, ಅನಿತಾಶೆಟ್ಟಿ ಇದ್ದರು.
Published on

ಎನ್.ಆರ್.ಪುರ: ಹೆಣ್ಣು ಮಕ್ಕಳು ಋತುಸ್ರಾವ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಸಲಹೆ ನೀಡಿದರು.
ಪಟ್ಟಣದ ಎನ್.ಆರ್.ಪುರ -2 ಅಂಗನವಾಡಿ ಕೇಂದ್ರದಲ್ಲಿ ಋತುಸ್ರಾವ ನೈರ್ಮಲ್ಯ ನಿರ್ವಹಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಸಹ ಋತುಸ್ರಾವ ಸಮಯದಲ್ಲಿ ಹೆಣ್ಣು ಮಕ್ಕಳ ವೈಯ್ಯಕ್ತಿಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಜಾಹೀರಾತು ನೀಡುತ್ತಿದೆ ಎಂದರು.
ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ದಾಕ್ಷಾಯಿಣಿ ಬಾಯಿ ಮಾತನಾಡಿ, ಪ್ರತಿ ವರ್ಷ ಮೇ 28ರಂದು ಋತುಸ್ರಾವ ನೈರ್ಮಲ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಈ ಯೋಜನೆಯು 2014ರ ಮೇ 28 ರಿಂದ ಜಾರಿಗೆ ಬಂದಿದೆ. ಹರೆಯದ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಬಗ್ಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಉಪಯೋಗಿಸುವ ಬಗ್ಗೆ ಹಾಗೂ ಸ್ವಚ್ಛತೆಯಿಂದ ವಿಲೇವಾರಿ ಮಾಡುವ ಬಗ್ಗೆ ಮಾಹಿತಿ ನೀಡಲಾಗುವುದು. ಈ ಹಿಂದೆ ಸರ್ಕಾರದಿಂದ ಶುಚಿ ಸಾನಿಟರಿ ಪ್ಯಾಡ್‌ಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳ ಮೂಲಕ ಉಚಿತ ವಿತರಣೆ ಮಾಡಲಾಗಿದೆ ಎಂದರು.
ಹೆಣ್ಣು ಮಕ್ಕಳು ಮುಟ್ಟಿನ ಬಗ್ಗೆ ಯಾವುದೇ ಮೂಢನಂಬಿಕೆ ಇಟ್ಟುಕೊಳ್ಳಬಾರದು. ಮುಟ್ಟು ಅಥವಾ ಋತುಸ್ರಾವ ಎನ್ನುವುದು ಹೆಣ್ಣು ಮಕ್ಕಳಿಗೆ ನೈಸರ್ಗಿಕವಾಗಿ ಪ್ರಕೃತಿ ದತ್ತವಾಗಿ ಬಂದಿರುವ ಒಂದು ಕ್ರಿಯೆ. ಆದ್ದರಿಂದ ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಸ್ನೇಹದ ವಾತಾವರಣ ಕಲ್ಪಿಸಿ ಕೊಡಬೇಕು ಎಂದರು.
ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿ ಸುಪ್ರಿತಾ ಮಾತನಾಡಿ, ಋತುಚಕ್ರ ಮತ್ತು ಋತು ಸ್ರಾವ ಸಮಯದಲ್ಲಿ ಹೊಟ್ಟೆ ನೋವು ಬರುವುದು ಹೆಣ್ಣು ಮಕ್ಕಳಲ್ಲಿ ಸಾಮಾನ್ಯ. ಹೆಣ್ಣು ಮಕ್ಕಳು ವೈಯ್ಯಕ್ತಿಕ ಸ್ವಚ್ಛತೆ ಕಡೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆ ಅನಿತಾಶೆಟ್ಟಿ,ಆಶಾ ಕಾರ್ಯಕರ್ತೆ ಕುಸಮ, ಕಿಶೋರಿ ಅನುಷಾ ಮತ್ತು ಸೀ ಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net