ಸರ್ಕಾರದ ಕಾರ್ಯಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸಿ

congres
Published on

ಮಡಿಕೇರಿ: ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳ ಕುರಿತು ಮತದಾರರಲ್ಲಿ ಅರಿವು ಮೂಡಿಸಲು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ಸರಕಾರದ ಯೋಜನೆಗಳು ಜನತೆಗೆ ತಿಳಿಯಲಿದೆ ಮತ್ತು ಪಕ್ಷ ಸಂಘಟನೆ ಪ್ರಬಲವಾಗಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಉಪಾಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಸ್ತುವಾರಿಯೂ ಆಗಿರುವ ಮಾಜಿ ಶಾಸಕ ಜೆ.ಆರ್.ಲೋಬೋ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರ್ಕಾರದ ಕಾರ್ಯಕ್ರಮಗಳನ್ನು ತಿಳಿಸಲು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ವಾಟ್ಸಪ್, ಟ್ವಿಟರ್, ಫೇಸ್‌ಬುಕ್, ಇನ್ ಸ್ಟಾಗ್ರಾಮ್ ಮತ್ತಿತರ ಮೂಲಗಳಲ್ಲಿ ಪ್ರಚಾರ ಕೈಗೊಳ್ಳಬೇಕು. ಪತ್ರಿಕೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಪರ ಲೇಖನಗಳನ್ನು ನೀಡಬೇಕು. ಪಕ್ಷದ ಕಾರ್ಯಕ್ರಮಗಳನ್ನು ಜನ ಸಮೂಹಕ್ಕೆ ತಿಳಿಹೇಳುವ ಉತ್ತಮ ಭಾಷಣಕಾರರನ್ನು ಕಲೆಹಾಕಿ ತರಬೇತಿ ನೀಡಿ ಕಾರ್ಯಾಗಾರ ನಡೆಸಬೇಕು. ಆ ಮೂಲಕ ಪ್ರಚಾರ ಸಮಿತಿ ತನ್ನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರುಗಳು ಆದಷ್ಟು ಶೀಘ್ರ ಬ್ಲಾಕ್ ಸಮಿತಿಯನ್ನು ರಚಿಸಿ ಜಿಲ್ಲಾ ಸಮಿತಿಗೆ ನೀಡಿದರೆ ಅದನ್ನು ರಾಜ್ಯ ಸಮಿತಿಯಿಂದ ಅನುಮೋದಿಸಲಾಗುವುದು. ಪ್ರತೀ ವಲಯ ಕಾಂಗ್ರೆಸ್‌ಗೆ ಮೂವರು, ಪ್ರತೀ ಬೂತ್ ಕಾಂಗ್ರೆಸ್ ಸಮಿತಿಗೆ ಇಬ್ಬರು ಕಾರ್ಯಕರ್ತರನ್ನು ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸಲು ನೇಮಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಮುಂಬರುವ ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ ಚುನಾವಣೆಗೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸನ್ನದ್ಧರಾಗಬೇಕು. ಆ ನಿಟ್ಟಿನಲ್ಲಿ ಪ್ರಚಾರ ಸಮಿತಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿ ಜಿಲ್ಲಾ ಕಾಂಗ್ರೆಸ್ ನೊಂದಿಗೆ ಕಾರ್ಯನಿರ್ವಹಿಸಬೇಕು. ಇತರ ಪಕ್ಷಗಳ ಅಪಪ್ರಚಾರ ಮತ್ತು ಟೀಕೆಗಳಿಗೆ ಸರಿಯಾದ ಪ್ರತ್ಯುತ್ತರವನ್ನು ಪ್ರಚಾರ ಸಮಿತಿ ನೀಡಬೇಕಾಗಿದೆ ಎಂದು ತಿಳಿಸಿದರು.

ನೂತನ ಬ್ಲಾಕ್ ಸಮಿತಿ ಅಧ್ಯಕ್ಷರುಗಳು ಪಕ್ಷದ ಬಲವರ್ಧನೆಗಾಗಿ ಕಾರ್ಯಕ್ರಮ ರೂಪಿಸಿಕೊಂಡು ವಲಯ ಹಾಗೂ ಬೂತ್ ಮಟ್ಟದ ಅಧ್ಯಕ್ಷ ಮತ್ತು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಪರವಾಗಿ ಪ್ರಚಾರ ಕೆಲಸಕ್ಕೆ ಇಳಿಯಬೇಕೆಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಅ.೨೯ ರಂದು ರಾಜ್ಯ ಪ್ರಚಾರ ಸಮಿತಿಯ ಸಭೆ ನಡೆಯಲಿದ್ದು, ಅಷ್ಟರೊಳಗೆ ನೂತನ ಬ್ಲಾಕ್ ಸಮಿತಿ ರಚಿಸಬೇಕೆಂದು ಹೇಳಿದರು.

ಪ್ರಚಾರದ ಕೊರತೆಯಿಂದ ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು ಮತದಾರರಿಗೆ ತಿಳಿಯುತ್ತಿಲ್ಲ. ಬೂತ್ ಮಟ್ಟದಿಂದ ಪ್ರಚಾರ ಆರಂಭಿಸಿದರೆ ಜನಜಾಗೃತಿ ಉಂಟಾಗಿ ಪಕ್ಷದ ಬಲವರ್ಧನೆಯಾಗಲಿದೆ. ಮುಂದಿನ ದಿನಗಳಲ್ಲಿ ಪ್ರಚಾರ ಸಮಿತಿಯ ಮೂಲಕ ಕಾರ್ಯಕರ್ತರಿಗೆ ತರಬೇತಿ ಮತ್ತು ಕಾರ್ಯಾಗಾರಗಳನ್ನು ನಡೆಸುವುದಾಗಿ ತಿಳಿಸಿದರು.

ಕಾಂಗ್ರೆಸ್ ಪ್ರಚಾರ ಸಮಿತಿಯ ನೂತನ ಬ್ಲಾಕ್ ಅಧ್ಯಕ್ಷರುಗಳಾದ ಲಾರೆನ್ಸ್, ಎ.ಕೆ.ಹಕೀಂ, ವಿ.ಜಿ.ಮೋಹನ್, ಮತೀನ್, ಟಾಟು ಮೊಣ್ಣಪ್ಪ, ಪೆರುಮುಂಡನ ಮನು, ಹಿರಿಯ ನಾಯಕರಾದ ಎರ್ಮುಹಾಜಿ, ಪ್ರಮುಖರಾದ ರವೂಫ್, ಸುನಿಲ್ ಪತ್ರಾವೊ ಮತ್ತಿತರರು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ಹಿರಿಯ ನಾಯಕರಾದ ಎಸ್.ಎಂ.ಚಂಗಪ್ಪ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಹಂಸ, ಪ್ರಮುಖರಾದ ಜುಲೇಕಾಬಿ, ಅಗಸ್ಟಿನ್ ಜಯರಾಜ್, ಪುಷ್ಪ ಪೂಣಚ್ಚ, ಕೆ.ಸಿ.ಮೋಹನ್ ರಾಜ್, ಪ್ರೇಮಾ ಕೃಷ್ಣಪ್ಪ, ಕೆ.ಎಂ.ಕುಮಾರ್, ಜಿ.ಆರ್.ರಾಜು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net