ಮಕ್ಕಳಲ್ಲಿ ದೇಶಾಭಿಮಾನ ಬೆಳೆಸಿ ಸತ್ಪ್ರಜೆಯಾಗಿ ಮಾಡಿ, ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಸಲಹೆ

26 Nela Ph 02 Dance
Published on

ನೆಲಮಂಗಲ: ಅನೇಕ ಸವಾಲುಗಳ ನಡುವೆಯೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನೆಡಿಸಿದ ಮಹಾಪುರುಷರು ಹಾಗೂ ಶತ್ರುಗಳಿಂದ ಕಾಪಾಡುತ್ತಿರುವ ಸೈನಿಕರನ್ನು ಸ್ಮರಿಸಿ ಅಭಿನಂದಿಸಬೇಕಿದೆ ಎಂದು ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ತಿಳಿಸಿದರು.

ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಬೆಳೆಸಿ ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಿದಲ್ಲಿ ರಾಷ್ಟ್ರೀಯ ಹಬ್ಬ ಆಚರಣೆ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಂಡು ಮತ್ತಷ್ಟು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಬೇಕು ಎಂದರು.

ಡಾ. ಬಿ.ಆರ್. ಅಂಬೇಡ್ಕರ್ 60ಕ್ಕೂ ಹೆಚ್ಚು ದೇಶಗಳ ಸಂವಿಧಾನವನ್ನು ಓದಿ 2 ವರ್ಷ 11 ತಿಂಗಳು 17 ದಿವಸ ಪರಿಶ್ರಮ ಹಾಕಿ ದೇಶದ ಸಂವಿಧಾನವನ್ನು ರಚಿಸಿದ್ದಾರೆ. ಅಂಬೇಡ್ಕರ್ ಅವರ ಅದರ್ಶ, ತತ್ವ ಸೇರಿ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಅವರನ್ನು ಸುಸಂಸ್ಕೃತರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಹೇಳಿದರು.

ತಹಸೀಲ್ದಾರ್ ಕೆ. ಮಂಜುನಾಥ್ ಮಾತನಾಡಿ, ಭಾರತದ ಆಡಳಿತ ವ್ಯವಸ್ಥೆಯಲ್ಲಿದ್ದ ರಾಜಪ್ರಭುತ್ವವನ್ನು ತೊಡೆದುಹಾಕಿ ಪ್ರಜಾಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಜತಗೆ ಸಾಮಾಜಿಕ ನ್ಯಾಯ, ಸಮಾನತೆಯ ಪ್ರತೀಕವಾದ ಸಂವಿಧಾನವನ್ನು ಅಳವಡಿಸಿಕೊಂಡ ಸ್ಮರಣಾರ್ಥವಾಗಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು.

ಸಾಧಕರಿಗೆ ಸನ್ಮಾನ: ಕರೊನಾ ಸೇನಾನಿಗಳಾದ ವೈದ್ಯರು, ಆಶಾಕಾರ್ಯಕರ್ತೆಯರು ಮತ್ತು ಮಾಜಿ ಯೋಧರು, ವಿಜಯವಾಣಿ ತ್ಯಾಮಗೊಂಡ್ಲು ವರದಿಗಾರರ ಲಕ್ಷ್ಮೀಕಾಂತ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ಮಕ್ಕಳು ನೃತ್ಯರೂಪಕಗಳನ್ನು ಪ್ರದರ್ಶಿಸಿದರು.

ನಗರದ ಪ್ರವಾಸಿ ಮಂದಿರದಿಂದ ಕ್ರೀಡಾಂಗಣದವರೆಗೆ ಪ್ರಬಾತ್‌ೇರಿ ನಡೆಸಲಾಯಿತು.

ಸನಾತನ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಕೆ.ವಿ. ಶ್ರೀನಿವಾಸ್, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್. ಮಲ್ಲಯ್ಯ, ವಿಶೇಷ ತಹಸೀಲ್ದಾರ್ ಎಂ.ಎಸ್. ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ರಮೇಶ್, ನಗರಸಭೆ ಪೌರಾಯುಕ್ತ ಎಲ್. ಮಂಜುನಾಥ್‌ಸ್ವಾಮಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಬಿ. ರಂಗನಾಥ್, ಶಿರಸ್ತೇದಾರ್ ಶ್ರೀನಿವಾಸ್‌ಮೂರ್ತಿ, ರಾಜಸ್ವನಿರೀಕ್ಷಕ ರವಿಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಸಿ. ಕೇಶವಮೂರ್ತಿ, ಜನಸೈನ್ಯ ಸಂಘಟನೆ ಅಧ್ಯಕ್ಷ ಬಿ. ನರಸಿಂಹಯ್ಯ ಮತ್ತಿತರರು ಇದ್ದರು.

ಎಲ್ಲೆಡೆ ಹಾರಿದ ತ್ರಿವರ್ಣಧ್ವಜ: ಪಟ್ಟಣ ಸೇರಿ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿ ಆವರಣದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net