

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಧಾರವಾಡ ಜಿಲ್ಲೆಯ ಲಿಂಗಾಯತ ವೀರಶೈವ ಮುಖಂಡರಿಗೆ ನೀಡಬೇಕು ಎಂದು ಸಮಾಜದ ಪ್ರಮುಖರು ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಎಂ.ಎಸ್. ಅಕ್ಕಿ, ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ, ಮಾಜಿ ಎಂಎಲ್ಸಿ ಮೋಹನ ಲಿಂಬಿಕಾಯಿ, ಇತರರು ಸಮಾಜದವರಿಗೆ ಪರಿಷತ್ ಸದಸ್ಯ ಸ್ಥಾನ ನೀಡದಿದ್ದರೆ ನಾವೆಲ್ಲ ಸೇರಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಲು ಲಿಂಗಾಯತ ವೀರಶೈವ ಸಮಾಜಕ್ಕೆ ಸೇರಿದ ಸಮರ್ಥ ವ್ಯಕ್ತಿಗೆ ಟಿಕೆಟ್ ನೀಡಬೇಕು. ನೀತಿಗೆಟ್ಟ ರಾಜಕಾರಣಿ ಜಗದೀಶ ಶೆಟ್ಟರ್ ಹಿಂದೆ ಲಿಂಗಾಯತ ಸಮಾಜ ಹೋಗುವುದಿಲ್ಲ. ಬಿಜೆಪಿಗೆ ಮರಳಿ ಸೇರಿದ ಶೆಟ್ಟರ್ ಕಾಂಗ್ರೆಸ್ಗೆ ಅಷ್ಟೇ ಅಲ್ಲ, ಸಮಾಜಕ್ಕೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ಎಂ.ಎಸ್. ಅಕ್ಕಿ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಜಗದೀಶ ಶೆಟ್ಟರ್ಗೆ ಕಾಂಗ್ರೆಸ್ ಪಕ್ಷ ಎಂಎಲ್ಸಿ ಮಾಡಿ ಗೌರವ ಕೊಡುವ ಕೆಲಸ ಮಾಡಿತ್ತು. ಅವರೀಗ ಬಿಜೆಪಿಗೆ ಸೇರಿರುವುದರಿಂದ ಕಾಂಗ್ರೆಸ್ಗೆ ಯಾವುದೇ ಹಾನಿ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಸಮಾಜದ ಯಾರಿಗೆ ಟಿಕೆಟ್ ನೀಡಿದರೂ ಆಯ್ಕೆ ಮಾಡಿಕೊಂಡು ಬರುತ್ತೇವೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ ಮಾತನಾಡಿ, ಶೆಟ್ಟರ್ ಕಾಂಗ್ರೆಸ್ ಸೇರಿದ್ದಾಗ ಪಕ್ಷಕ್ಕೆ ಏನೂ ಲಾಭ ಆಗಿರಲಿಲ್ಲ. ಸ್ವತಃ ಅವರೇ 35 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದ್ದರು. ಐಟಿ, ಇಡಿ ದಾಳಿಯ ಭಯದಿಂದ ಅವರು ಬಿಜೆಪಿಗೆ ಮರಳಿ ಹೋಗಿದ್ದಾರೆಯೇ ಹೊರತು ಬೇರೆ ಏನೂ ಇಲ್ಲ ಎಂದರು.
ಮಾಜಿ ಎಂಎಲ್ಸಿ ಮೋಹನ ಲಿಂಬಿಕಾಯಿ ಮಾತನಾಡಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಂದ ರಾಜಕೀಯವಾಗಿ ಲಾಭ ಪಡೆದವರು ಯಾರೂ ಅವರು ಕೆಜೆಪಿ ಕಟ್ಟಿದಾಗ ಅವರೊಂದಿಗೆ ಹೋಗಲಿಲ್ಲ. ನಾನು ಕೆಜೆಪಿ ಸೇರಿ ಬಳಿಕ ಯಡಿಯೂರಪ್ಪ ಅವರೊಂದಿಗೆ ಮರಳಿ ಬಿಜೆಪಿಗೆ ಬಂದಿದ್ದೆ. ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ, ಪ್ರಚಾರ ಆರಂಭಿಸು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದರು. ಆದರೆ, ನನಗೆ ಟಿಕೆಟ್ ಕೊಡಲು ಶೆಟ್ಟರ್ ಒಪ್ಪುತ್ತಿಲ್ಲ ಎಂಬುದು ಜೋಶಿ ಅವರ ಸ್ಪಷ್ಟನೆಯಾಗಿತ್ತು. ಬಳಿಕ ಬಸವರಾಜ ಹೊರಟ್ಟಿ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ನೀಡಿದರು. ಸುಮಾರು 15 ವರ್ಷಗಳ ಕಾಲ ಬಿಜೆಪಿಯವರು ನನಗೆ ಮೋಸ ಮಾಡಿದರು ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಶರಣಪ್ಪ ಕೊಟಗಿ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ಅರವಿಂದ ಕಟಗಿ, ಸುರೇಶ ಸವಣೂರ, ಪ್ರಕಾಶಗೌಡ ಪಾಟೀಲ ಇದ್ದರು.