ಮಿಷನ್ ಇಂದ್ರಧನುಷ್ ಯಶಸ್ವಿಗೊಳಿಸಿ

Make Mission Indradhanush successful
ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಮಿಷನ್ ಇಂದ್ರಧನುಷ ಕಾರ್ಯಕ್ರಮದ ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಪ್ರಚಾರ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಯಶ್ರೀ ಎಮ್ಮಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಬಿ.ಜಿ. ಹುಬ್ಬಳ್ಳಿ, ಕುಟುಂಬ ಕಲ್ಯಾಣಾಧಿಕಾರಿ ಡಾ. ಅರವಿಂದ ಪಟ್ಟಣಶೆಟ್ಟಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಕುಸುಮಾ ಮಾಗಿ, ಡಿವೈಪಿಸಿಯ ಉಪ ಸಮನ್ವಯಾಧಿಕಾರಿ ಜಾಸ್ಮೀನ್ ಕಿಲ್ಲೇದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Published on

ಬಾಗಲಕೋಟೆ : ಮಾರಕ ರೋಗಗಳ ವಿರುದ್ಧ ಮಕ್ಕಳನ್ನು ರಕ್ಷಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಅನೇಕ ಲಸಿಕೆಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಮಿಷನ್ ಇಂದ್ರಧನುಷ್ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲಸಿಕೆಗಳನ್ನು ಕಾಲಕಾಲಕ್ಕೆ ಪಡೆಯದೆ ವಂಚಿತರಾದ 5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರನ್ನು ಗುರಿಯಾಗಿಸಿಕೊಂಡು ಬಿಟ್ಟುಹೋದ ಲಸಿಕೆಗಳನ್ನು ಪೂರ್ಣಗೊಳಿಸಲು ಇಂದ್ರಧನುಷ್ ಲಸಿಕಾ ಅಭಿಯಾನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.

ಆ. 7 ರಿಂದ 12ರ ವರೆಗೆ, ಸೆಪ್ಟೆಂಬರ್ 11 ರಿಂದ 16 ರವರೆಗೆ, ಅಕ್ಟೋಬರ 9 ರಿಂದ 14ರ ವರೆಗೆ ಅಭಿಯಾನ ನಡೆಯಲಿದೆ. ಮುಖ್ಯವಾಗಿ ಲಸಿಕೆಯಿಂದ ವಂಚಿತರಾಗಿರುವ, ಅಪಾಯದಲ್ಲಿರುವ ಪ್ರದೇಶ ಮತ್ತು ಸಮುದಾಯಗಳನ್ನು ಗುರುತಿಸಿ ಲಸಿಕೆ ನೀಡುವ ಕಾರ್ಯವಾಗಬೇಕು.

ಶೇಷವಾಗಿ ಧಡಾರ-ರುಬೆಲ್ಲಾ ಲಸಿಕಾಕರಣ, ಪಿವಿಸಿ ಲಸಿಕಾಕರಣ ಮತ್ತು ಇತ್ತೀಚಿನ 3ನೇ ಡೋಸ್ ಆಗಿ ಸೇರ್ಪಡೆಗೊಳಿಸಿದ ಎಪ್‌ಐಪಿವಿ ಲಸಿಕಾಕರಣ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ವಿಷನ್ ಇಂದ್ರಧನುಷ್ ಕಾರ್ಯಕ್ರಮ ಸಮರ್ಪಕ ಅನುಷ್ಠಾನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಪಾತ್ರ ಮುಖ್ಯವಾಗಿದೆ. ಅವರ ಸಹಕಾರ ಪಡೆದುಕೊಂಡು ಜಿಲ್ಲೆಯಲ್ಲಿ ಲಸಿಕೆಯಿಂದ ವಂಚಿತರಾದವರಿಗೆ ಲಸಿಕೆ ನೀಡುವ ಕಾರ್ಯವಾಗಬೇಕು. ಈ ಕಾರ್ಯದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ತಿಳಿಸಿದರು.

ಡೆಂಘೆ, ಚಿಕೂನ್‌ಗುನ್ಯಾ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಖಚಿತ ಪಟ್ಟ 68 ಡೆಂಘೆ ಮತ್ತು 21 ಚಿಕೂನ್‌ಗುನ್ಯಾ ಪ್ರಕರಣಗಳು ಕಂಡುಬಂದಿದ್ದು, ಈ ಭಾಗದ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಮನೆ ಮನೆ ಭೇಟಿ ನೀಡಿ ನೀರು ಸಂಗ್ರಹಿಸುವ ತೊಟ್ಟಿಗಳನ್ನು ಪರೀಕ್ಷಿಸಬೇಕು. ಲಾರ್ವಾ ಸಮೀಕ್ಷೆ ಮತ್ತು ಲಾರ್ವಾ ಉತ್ಪತ್ತಿ ತಾಣಗಳನ್ನು ನಿರ್ಮೂಲನೆಗೊಳಿಸುವ ಚಟುವಟಿಕೆ ನಿರಂತರ ನಡೆಸಲು ಸೂಚಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾಧಿಕಾರಿ ಮುಕುಂದ ಗಲಗಲಿ ಅವರು ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಅನುಷ್ಠಾನದ ರೂಪುರೇಷಗಳ ಬಗ್ಗೆ ತಿಳಿಸಿದರು.ಇದೇ ವೇಳೆ ಪ್ರಚಾರ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಯಶ್ರೀ ಎಮ್ಮಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಬಿ.ಜಿ. ಹುಬ್ಬಳ್ಳಿ, ಕುಟುಂಬ ಕಲ್ಯಾಣಾಧಿಕಾರಿ ಡಾ. ಅರವಿಂದ ಪಟ್ಟಣಶೆಟ್ಟಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಕುಸುಮಾ ಮಾಗಿ, ಡಿವೈಪಿಸಿಯ ಉಪ ಸಮನ್ವಯಾಧಿಕಾರಿ ಜಾಸ್ಮೀನ್ ಕಿಲ್ಲೇದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net