

ಮಹಾಲಿಂಗಪುರ: ಪಟ್ಟಣದ ಶ್ರೀ ಅನ್ನ ಪೂಣೇಶ್ವರಿ ದೇವಸ್ಥಾನದಲ್ಲಿ ಬುಧವಾರ ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ ಸಭೆ ನಡೆಯಿತು.
ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, ಹೋರಾಟವು ಸುಧೀರ್ಘ 500 ದಿನಗಳನ್ನು ಪೂರೈಸುತ್ತಾ ಸಾಗಿದರೂ ನಮ್ಮ ತಾಲೂಕು ಬೇಡಿಕೆ ಕುರಿತು ಹಿಂದಿನ ಬಿಜೆಪಿ ಮತ್ತು ಸದ್ಯದ ಕಾಂಗ್ರೆಸ್ ಸರ್ಕಾರ ಕೇವಲ ಭರವಸೆ ನೀಡುತ್ತಿದೆ. ಜನತೆಯ ಹೋರಾಟವನ್ನು ಅಣಕಿಸಿದಂತಾಗಿದೆ. ಇಲ್ಲಿಯ ನಾಗರಿಕರ ಹಕ್ಕೋತ್ತಾಯಗಳನ್ನು ದಮನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರ ಇನ್ನೊಂದು ಸಭೆ ಕರೆದು ಉಗ್ರ ಹೋರಾಟ ಮಾಡಬೇಕೋ ಅಥವಾ ಆಮರಣ ಉಪವಾಸ ಸತ್ಯಾಗ್ರಹ ಮಾಡಬೇಕೋ ಎಂಬ ನಿರ್ಧಾರ ಕೈಗೊಳ್ಳಲಾಗುವುದು. ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಹೋರಾಟ ಸಮಿತಿ ಕಾರ್ಯದರ್ಶಿ ಧರೆಪ್ಪ ಸಾಂಗಲಿಕರ ಮಾತನಾಡಿ, ತಾಲೂಕು ರಚನೆ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ನಿರಾಸೆಯ ಭಾವ ಮೂಡಿದೆ ಎಂದರು.
ಹೋರಾಟ ಸಮಿತಿಯ ಸಿದ್ದು ಶಿರೋಳ, ಶಿವಲಿಂಗ ಟಿರಕಿ, ವಿರೇಶ ಆಸಂಗಿ, ಎಂ.ಎಸ್. ಮುಗಳಖೋಡ, ಎಂ.ಐ. ಡಾಂಗೆ, ಸತ್ಯಪ್ಪ ಹುದ್ದಾರ, ಈರಣ್ಣ ಹಲಗತ್ತಿ, ಎಂ.ಆರ್. ತೇರದಾಳ, ರಾಜು ತೇರದಾಳ ಇತರರಿದ್ದರು.