

ಸೋಮವಾರಪೇಟೆ: ಮಾದಾಪುರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಹೋಬಳಿ ಕೇಂದ್ರವಾಗಿ ಮೇಲ್ದರ್ಜೆಗೇರಿಸಿ, ನಾಡ ಕಚೇರಿ ತೆರೆಯಬೇಕೆಂದು ಆಗ್ರಹಿಸಿ ಸೋಮವಾರಪೇಟೆ ತಾಲೂಕು ಆಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಮಾದಾಪುರ, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಸೇರಿದಂತೆ ಈ ಭಾಗದ ಅನೇಕ ಗ್ರಾಮಗಳು ಗುಡ್ಡಗಾಡು ಪ್ರದೇಶದಲ್ಲಿದ್ದು, ಕೆಲ ಗ್ರಾಮಗಳು ಸಂಪೂರ್ಣ ಹಿಂದುಳಿದ ಗ್ರಾಮಗಳಾಗಿವೆ. ಪ್ರಕೃತಿ ವಿಕೋಪ, ಅತೀವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ತಕ್ಷಣ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಸರಿಯಾದ ಸಮಯದಲ್ಲಿ ಅನೇಕ ಗ್ರಾಮಗಳಿಗೆ ಬಸ್‌ಗಳ ಸೌಲಭ್ಯವಿಲ್ಲ. ದೂರದಲ್ಲಿ ತಾಲೂಕು ಕೇಂದ್ರವಿದ್ದು, ಕೃಷಿಕರು ತಾಲೂಕು ಕೇಂದ್ರಕ್ಕೆ ಬಂದು ಕಂದಾಯ ಇಲಾಖೆಯಲ್ಲಿ ಕೆಲಸ ಮಾಡಿಸಿಕೊಳ್ಳಲು ಹರಸಾಹಸ ಮಾಡಬೇಕಾಗಿದೆ. ಇದರಿಂದ ಹಣ, ಸಮಯ ಹಾಳಾಗುತ್ತಿದೆ. ಮಾದಾಪುರವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಿದಲ್ಲಿ ಸಾರ್ವಜನಿಕರ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈಗಾಗಲೇ ಮಾದಾಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಉಪಠಾಣೆ, ರಾಷ್ಟ್ರೀಕೃತ ಬ್ಯಾಂಕ್, ತೋಟಗಾರಿಕಾ ಇಲಾಖೆ ಸೇರಿದಂತೆ ಕೆಲವು ಕಚೇರಿಗಳಿವೆ. ಕೂಡಲೇ ಅವುಗಳನ್ನು ಮೇಲ್ದರ್ಜೆಗೇರಿಸಿ, ಮಾದಾಪುರ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಸಮಿತಿ ಅಧ್ಯಕ್ಷ ಡಿ.ಕೆ.ಅರುಣ್ ಕುಮಾರ್ ಒತ್ತಾಯಿಸಿದರು.
ಸಂಬಂಧಿಸಿದ ಮನವಿಯನ್ನು ಕೊಡಗು ಜಿಲ್ಲಾಧಿಕಾರಿ, ಸೋಮವಾರಪೇಟೆ ತಹಸೀಲ್ದಾರ್ ಅವರಿಗೆ ನೀಡಲಾಯಿತು. ಮನವಿ ಸಲ್ಲಿಸುವ ಸಂದರ್ಭ ಸಮಿತಿ ಉಪಾಧ್ಯಕ್ಷೆ ಕೆ.ಎನ್. ದೀಪಕ್, ಪ್ರಧಾನ ಕಾರ್ಯದರ್ಶಿ ಆದರ್ಶ್, ಕಾನೂನು ಸಲಹೆಗಾರ ಜೀವನ್, ನಿವೃತ್ತ ಉಪತಹಸೀಲ್ದಾರ್ ಜಯರಾಂ, ಹೆಗ್ಗುಳ ಹೂವಯ್ಯ, ಬೆಂಬಳೂರು ಪ್ರಕಾಶ್, ಸಂದೀಪ್, ರಕ್ಷಿತ್ ಹಾಗೂ ಮಾದಾಪುರ ಗ್ರಾಮಸ್ಥರು ಇದ್ದರು.