

ಶಿವಮೊಗ್ಗ: ಯಾವುದೇ ಸಹಕಾರ ಸಂಘ ಅಥವಾ ಬ್ಯಾಂಕ್ ಗಳಿರಲಿ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಅತ್ಯಂತ ಪ್ರಮುಖವಾದ ಘಟ್ಟವಾಗುತ್ತದೆ ಎಂದು ವಾಲ್ಮೀಕಿ ಶಬರಿ ಸಹಕಾರ ಸಂಘದ ಅಧ್ಯಕ್ಷೆ ಟಿ.ತಾರಾ ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಮಹರ್ಷಿ ವಾಲ್ಮೀಕಿ ವಿವಿಧೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳಲ್ಲಿ, ಬ್ಯಾಂಕುಗಳಲ್ಲಿ ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದಾಗ ಮಾತ್ರ ಬ್ಯಾಂಕುಗಳು, ಸಂಘಗಳು ಸದೃಢವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಅನೇಕ ಸಹಕಾರಿ ಸಂಘಗಳು ವಿಫಲಗೊಳ್ಳಲು ಸಾಲ ಮರುಪಾವತಿ ಸಮರ್ಪಕವಾಗಿ ಆಗದಿರುವುದೆ ಇದಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ ಚಿಂತಿಸುವ ಅಗತ್ಯವಿದೆ ಎಂದರು.
ಮಹರ್ಷಿ ವಾಲ್ಮೀಕಿ ಸಹಕಾರ ಸಂಘದ ಅಧ್ಯಕ್ಷ ಟಿ.ಮಂಜಪ್ಪ ಮಾತನಾಡಿ, ಇನ್ನೇನು ಮುಗಿದೆ ಹೋಯಿತು ಎನ್ನುವ ಸಹಕಾರಿ ಸಂಘವನ್ನು ಈ ಮಟ್ಟಕ್ಕೆ ಎಳೆದುಕೊಂಡು ಬಂದಿದ್ದೇವೆ. ಇನ್ನು ಮುಂದೆ ಇದನ್ನು ಎಳೆಯುವ ಜವಾಬ್ದಾರಿ ಸಮಾಜದ ಎಲ್ಲರ ಹೆಗಲ ಮೇಲಿದೆ. ಈಗಾಗಲೇ ಸಾಲ ಪಡೆದಿರುವ ಎಲ್ಲರೂ ಮರುಪಾವತಿ ಮಾಡಿ ಮತ್ತೆ ಸಾಲ ಪಡೆಯುವುದು ಹಾಗೂ ಠೇವಣಿಯನ್ನು ಹೆಚ್ಚಾಗಿ ಇಡುವ ಮೂಲಕ ಸಮಾಜದ ಕಟ್ಟ ಕಡೆಯ ಬಡವನಿಗೂ ಹಣಕಾಸು ನೆರವು ದೊರೆಯಲು ಸಹಕಾರ ನೀಡುವಂತೆ ವಿನಂತಿಸಿದರು.
ಸಂಘದ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ ಮಾತನಾಡಿ, ಜೀವವೇ ಇಲ್ಲದ ಮಹರ್ಷಿ ವಾಲ್ಮೀಕಿ ಸಹಕಾರ ಸಂಘವನ್ನು ಎತ್ತಿ ನಿಲ್ಲಿಸುವ ಪ್ರಯತ್ನ ಮಾಡಿದ ಮಂಜಪ್ಪ ಅವರ ಸೇವೆ ಶ್ಲಾಘನೀಯ. ಅವರಿಗೆ ಕೈಜೋಡಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾವೆಲ್ಲರೂ ಮಾಡೋಣ ಎಂದರು.
ಬಿ.ಬಸವರಾಜ್ ಭದ್ರಾವತಿ, ನಿಂಗಮೂರ್ತಿ ಎಸ್.ಎಚ್.ಹೊಸನಗರ ಮಾತನಾಡಿದರು. ಬ್ಯಾಂಕಿನ ನಿರ್ದೇಶಕರಾದ ಆರ್.ಮಂಜುಳಮ್ಮ, ಎನ್.ರಾಜಶೇಖರಪ್ಪ, ಬಿ.ರಾಮಪ್ಪ, ಕೆ.ಬಿ.ಹಾಲಪ್ಪ, ಶಕುಂತಲಾ, ವಿ.ಸತೀಶ್ ಇದ್ದರು. ವೈ.ಬಿ.ಚಂದ್ರಕಾಂತ್ ನಿರೂಪಿಸಿದರು. ಆರ್.ಶಿವಕುಮಾರ್ ಸ್ವಾಗತಿಸಿದರು.