ಸಂಘ, ಸಂಸ್ಥೆಗಳ ನೆರವನ್ನು ಸದುಪಯೋಗಪಡಿಸಿಕೊಳ್ಳಿ

19arsph1ep_
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನಗರದ ಸೇವಾಲಾಲ್ ಸಮುದಾಯ ಭವನದಲ್ಲಿ ಡಿಪ್ಲೊಮಾ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಪಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೋಹನ್ ಕುಮಾರ್ ಚೆಕ್ ವಿತರಿಸಿದರು. ಶ್ರೀಕಾಂತ್ ನವಲಗುಂದ, ಅಕ್ಷತಾ ರೈ, ವಸಂತ್, ಸುರೇಶ್ ಇದ್ದರು.
Published on

ಅರಸೀಕೆರೆ: ಸಂಘ, ಸಂಸ್ಥೆಗಳು ನೀಡುವ ಆರ್ಥಿಕ ನೆರವು ಪಡೆದು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಬಿಇಒ ಮೋಹನ್ ಕುಮಾರ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ನಗರದ ಸೇವಾಲಾಲ್ ಸಮುದಾಯ ಭವನದಲ್ಲಿ ಮಂಗಳವಾರ ಡಿಪ್ಲೊಮಾ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಪಡೆಯುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್ ವಿತರಿಸಿ ಮಾತನಾಡಿದರು.

ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಹಿತ ಮನಗಂಡಿರುವ ಸರ್ಕಾರ ಉಚಿತ ಪಠ್ಯ ಪುಸ್ತಕ, ಬಿಸಿಯೂಟ, ಸಮವಸ್ತ್ರ ಒಳಗೊಂಡಂತೆ ಹಲವು ಸವಲತ್ತು ಒದಗಿಸುತ್ತಿದೆ. ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪ್ರತಿ ತಿಂಗಳು ಆರ್ಥಿಕ ನೆರವು ನೀಡುತ್ತಿರುವುದು ಶ್ಲಾಘನೀಯ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಪ್ರಗತಿ ಸಾಧಿಸುವ ಮೂಲಕ ಕಲಿತ ಶಾಲೆ, ಶಿಕ್ಷಕರು ಹಾಗೂ ದಾನಿಗಳಿಗೆ ಗೌರವ ತರಬೇಕು ಎಂದು ಸಲಹೆ ನೀಡಿದರು.

ಚೇಂಬರ್ ಆಫ್ ಕಾಮರ್ಸ್‌ನ ಶ್ರೀಕಾಂತ ನವಲಗುಂದ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳು ಮಾನದಂಡವಾಗಿದೆ. ಇದರ ಹೊರತಾಗಿ ಕಲಿಕೆಯ ಜತೆಗೆ ಗುರು, ಹಿರಿಯರನ್ನು ಪ್ರೀತಿ, ವಿಶ್ವಾಸದಿಂದ ಕಾಣುವ ಪರಿಪಾಠ ಬೆಳಸಿಕೊಳ್ಳಬೇಕು. ಆಗ ಮಾತ್ರವೇ ವಿದ್ಯೆಗೆ ನಿಜವಾದ ಬೆಲೆ ಸಿಗಲಿದೆ ಎಂದರು.

ಯೋಜನಾಧಿಕಾರಿ ಅಕ್ಷತಾ ರೈ, ಕೆ.ಜಿ.ಗಣೇಶ್ ಮೂರ್ತಿ, ದೈಹಿಕ ಶಿಕ್ಷಣ ಪರಿವೀಕ್ಷಕ ವಸಂತ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಜಿಲ್ಲಾ ನಿರ್ದೇಶಕ ಸುರೇಶ್, ಕೇಶವ ಪ್ರಸಾದ್, ಮಂಜುನಾಥ್ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net