

ಹನೂರು: ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಸದೃಢರಾಗುವ ಮೂಲಕ ಪ್ರತಿಯೊಬ್ಬರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮುಮ್ತಾಜ್ ಬಾನು ಸಲಹೆ ನೀಡಿದರು.
ಅಂಗವಿಕರು ಹಾಗೂ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ ವಿತರಣಾ ಸಂಬಂಧ ಪಟ್ಟಣದ ಪಿಎಂಶ್ರೀ ಸರ್ಕಾರಿ ಉನ್ನತೀಕರಿಸಿದ ಶಾಲಾವರಣದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಅಲಿಮ್ಕೊ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಅಂಗವಿಕಲರು ಎಲ್ಲರಂತೆಯೇ ಸಾಮಾನ್ಯರಾಗಿದ್ದು, ವಿವಿಧ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಹಾಗಾಗಿ ಇವರನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ. ಬದಲಾಗಿ ಸಮಾನರಂತೆ ಕಾಣಬೇಕು. ಇವರಿಗೆ ಅಗತ್ಯ ಸಾಧನಾ-ಸಲಕರಣೆ ಹಾಗೂ ತಾಪಂ, ಪಪಂ ಹಾಗೂ ಗ್ರಾಪಂನಲ್ಲಿ ಮೀಸಲಿರುವ ಅನುದಾನದಲ್ಲಿ ಸಿಗುವ ಸವಲತ್ತುಗಳನ್ನು ದೊರಕಿಸಿ ಕೊಡುವುದರ ಮೂಲಕ ಪ್ರೋತ್ಸಾಹ ನೀಡಬೇಕು. ಹಾಗೆಯೇ ಹಿರಿಯ ನಾಗರಿಕರು ಅಗತ್ಯ ಸಾಧನಾ ಸಲಕರಣೆಗಳನ್ನು ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಕೆಲ ಅಂಗವಿಕಲ ಪಾಲಕರು ಸರ್ಕಾರದಿಂದ ಸಿಗುವ ಸವಲತ್ತಿನಿಂದ ವಂಚಿತರಾಗಿರುವುದರ ಕುರಿತು ಸಭೆಯ ಗಮನಕ್ಕೆ ತಂದರು.
ಜಿಲ್ಲಾ ಅಂಗವಿಕಲ ಕಲ್ಯಾಣಾಕಾರಿ ಡಾ.ಮಂಜುನಾಥ್ ಮಾತನಾಡಿ, ಗ್ರಾಪಂಗಳಲ್ಲಿ ನಿಯೋಜಿಸಿರುವ ಸ್ವಯಂ ಸೇವಕರು ಈ ಬಗ್ಗೆ ಅಗತ್ಯ ಕ್ರಮವಹಿಸಿ ಸವಲತ್ತುಗಳನ್ನು ದೊರಕಿಸಿ ಕೊಡಬೇಕು ಎಂದು ಸೂಚಿಸಿದರು. ಬಳಿಕ ಪಾಲಕರೊಂದಿಗೆ ಆಗಮಿಸಿದ್ದ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ತಪಾಸಣೆ ನಡೆಸಲಾಯಿತು.