ಲಭ್ಯ ಸೌಲಭ್ಯಗಳ ಸದ್ಬಳಕೆಯಾಗಲಿ

Srinivas Mane
Published on

ಹಾನಗಲ್ಲ: ಲಭ್ಯ ಇರುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ನೀಡಲು ಕಾಳಜಿ ವಹಿಸಬೇಕು. ಹಳೇ ವಿದ್ಯಾರ್ಥಿಗಳು, ಎಸ್​ಡಿಎಂಸಿ ಸದಸ್ಯರು, ಗ್ರಾಮಸ್ಥರ ಮನವೊಲಿಸಿ ಅಗತ್ಯ ಸೌಲಭ್ಯ ಪಡೆಯುವಲ್ಲಿ ಗಮನ ಹರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಅವರಿಗೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಸ್ಮಾರ್ಟ್ ಕ್ಲಾಸ್ ಮತ್ತು ಕಂಪ್ಯೂಟರ್ ವ್ಯವಸ್ಥೆ ಹೊಂದುವ ನಿಟ್ಟಿನಲ್ಲಿ ಅರ್ಧ ಹಣ ಗ್ರಾಮಸ್ಥರಿಂದ ಸಂಗ್ರಹಿಸಿದರೆ ನಾನೂ ವೈಯಕ್ತಿಕವಾಗಿ ಉಳಿದ ಅರ್ಧ ಹಣ ನೀಡುತ್ತೇವೆ. ಈಗಾಗಲೇ ವರ್ದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಗ್ರಾಮಸ್ಥರ ಸಹಭಾಗಿತ್ವ ಹಾಗೂ ಇತರ ಸಂಘ, ಸಂಸ್ಥೆಗಳ ನೆರವಿನಿಂದ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಿದ್ದು, ಇನ್ನುಳಿದ ಶಾಲೆಗಳೂ ಮುಂದೆ ಬಂದರೆ ಸಹಕಾರ ನೀಡಲಾಗುವುದು ಎಂದು ಮಾನೆ ತಿಳಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ತಾಲೂಕಿನಲ್ಲಿ ಸುಧಾರಣೆ ಕಾಣಬೇಕು. ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಬೇಕು. ಅಗತ್ಯವಿದ್ದಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸಿ, ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಶೇಂಗಾ ಚಿಕ್ಕಿಯ ಗುಣಮಟ್ಟದತ್ತಲೂ ಗಮನ ಹರಿಸಬೇಕು ಎಂದು ಬಿಇಒಗೆ ಸೂಚಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಗುಂಡಪಲ್ಲಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net