

ಮೈಸೂರು: ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ಸದ್ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ(ಡಿ.ಎಲ್.ಪಿ.ಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ವರದಿಯಾಗಿರುವ ಪ್ರಕರಣಗಳು ಮುಂದಿನ ಸಭೆಯ ಒಳಗೆ ಚಾರ್ಜ್‌ಶೀಟ್ ಆಗಬೇಕು. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಸ್‌ಸಿ, ಎಸ್‌ಟಿ ಕುಂದು ಕೊರತೆಗಳ ಸಭೆಯನ್ನು ನಿಯಮಿತವಾಗಿ ನಡೆಸಬೇಕು ಎಂದು ನಿರ್ದೇಶನ ನೀಡಿದರು. ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಾದ ಫಲಾನುಭವಿಗಳಿಗೆ ಜಮೀನು ನೀಡಲು ಅಗತ್ಯ ಜಮೀನನ್ನು ಗುರುತಿಸಬೇಕು ಎಂದು ಜಿಲ್ಲೆಯ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಿದರು.
ಸ್ಮಶಾನಕ್ಕೆ ಅಗತ್ಯವಿರುವ ಜಮೀನನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಿ, ದೇವಸ್ಥಾನಗಳಲ್ಲಿ ಎಲ್ಲ ಜಾತಿಯ ಜನರಿಗೂ ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೂ ಪ್ರವೇಶ ಇರಬೇಕು. ಪ್ರವೇಶ ನಿರಾಕರಣೆ ಕಂಡು ಬಂದರೆ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಇದ್ದು, ಅಬಕಾರಿ ಇಲಾಖೆಯವರು ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಕಳೆದ ಒಂದು ವರ್ಷಗಳಿಂದ ಇರುವ ಸಮಸ್ಯೆಗಳನ್ನು ಇನ್ನೂ ಬಗೆಹರಿಸಿಲ್ಲ. ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಿ. ಈ ಸಭೆಯಲ್ಲಿ ಚರ್ಚೆಯಾದ ಸಮಸ್ಯೆಗಳು ಮುಂದಿನ ಸಭೆಯಲ್ಲಿ ಪರಿಹಾರದ ಹಂತಕ್ಕೆ ಬಂದಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯ ಜೆ. ಚಿಕ್ಕ ಜವರಯ್ಯ ಮಾತನಾಡಿ, ಮೈಸೂರು ಜಿಲ್ಲೆಯ ಖಾಸಗಿ ಶಾಲಾ ಕಾಲೇಜುಗಳಲ್ಲಿ ಎಸ್‌ಸಿ ಹಾಗೂ ಎಸ್‌ಟಿ ಮಕ್ಕಳು ಸರ್ಕಾರಿ ಕೋಟಾದಲ್ಲಿ ಸೇರಿದ್ದರೂ ಅಭಿವೃದ್ಧಿ ಶುಲ್ಕ ಎಂದು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಪರಿಹಾರವಾಗಿ ನೀಡಬೇಕಾದ ಭೂಮಿಯನ್ನು ಗುರುತಿಸಿ ಸರ್ಕಾರದ ಆದೇಶದ ಪ್ರಕಾರ ಆದಷ್ಟು ಬೇಗ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.