

ಬಾಳೆಹೊನ್ನೂರು: ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊರೆಯುವ ವಿವಿಧ ನವೀಕರಿಸಬಹುದಾದ ಸಂಪನ್ಮೂಲಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಎಂದು ಬಿ.ಕಣಬೂರು ಗ್ರಾಪಂ ಪಿಡಿಒ ಎಚ್.ಎಂ.ಕಾಶಪ್ಪ ಹೇಳಿದರು.
ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯು ವಿಶ್ವ ನವೀಕರಿಸಬಹುದಾದ ಸಂಪೂನ್ಮೂಲಗಳ ದಿನದ ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು, ಗಾಳಿ, ಸೂರ್ಯನ ಬೆಳಕು ಮತ್ತಿತರರ ಸಂಪನ್ಮೂಲಗಳು ನವೀಕರಿಸಬಹುದಾಗಿದ್ದು, ಇವುಗಳನ್ನು ಸಮಪರ್ಕವಾಗಿ ಬಳಸಿಕೊಂಡಲ್ಲಿ ಉತ್ತಮ ಪ್ರಯೋಜನಗಳು ನಮಗೂ ಮತ್ತು ಮುಂದಿನ ಪೀಳಿಗೆಗೆ ದೊರೆಯಲಿದೆ ಎಂದರು.
ಗ್ರಾಪಂ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ, ಒಣ ಕಸವನ್ನು ಸಹ ಪ್ರತ್ಯೇಕವಾಗಿ ವಿಂಗಡಿಸಿ ಅವುಗಳನ್ನು ನವೀಕರಿಸಬಹುದಾಗಿದ್ದು, ಇದರಿಂದಲೂ ಹಲವು ಉಪಯೋಗಗಳಿವೆ. ಗ್ರಾಮದಲ್ಲಿ ದೊರೆಯುವ ಒಣ ಕಸವನ್ನು ಆವಿಷ್ಕಾರಗೊಂಡಿರುವ ವಿನೂತನ ಯಂತ್ರಗಳಿಗೆ ನೀಡಿದರೆ ಆ ಯಂತ್ರ ಒಣ ಕಸವನ್ನು ವಿವಿಧ ಮಾದರಿಯಲ್ಲಿ ಪ್ರತ್ಯೇಕಿಸಿ ಪುನರ್‌ಬಳಕೆಗೆ ನೀಡಲಿದೆ. ಹಸಿ ಕಸವನ್ನು ಪ್ರತ್ಯೇಕ ನೀಡಿದಲ್ಲಿ ಅದಕ್ಕೆ ಗ್ರಾಪಂ ಸಿಬ್ಬಂದಿಗಳು ವಿವಿಧ ರಾಸಾಯನಿಕಗಳನ್ನು ಸೇರಿಸಿ ಜೈವಿಕ, ಸಾವಯವ ಗೊಬ್ಬರವನ್ನು ತಯಾರಿಸಬಹುದಾಗಿದೆ ಎಂದರು.
ಜೇಸಿಐ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ಅಶೋಕ್, ಪೂರ್ವಾಧ್ಯಕ್ಷ ಸುರೇಂದ್ರ, ಸುಧಾಕರ್, ಚೈತನ್ಯ ವೆಂಕಿ, ಬಿ.ಎಚ್.ಮನುಕುಮಾರ್, ಸದಸ್ಯ ರಾಮ್‌ಪ್ರಸಾದ್ ಮತ್ತಿತರರು ಇದ್ದರು.