ಪಿಎಂ ಸ್ವನಿಧಿ ಸದುಪಯೋಗ ಪಡಿಸಿಕೊಳ್ಳಿ

NRGL ARIVU
Published on

ನರೇಗಲ್ಲ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೀದಿ ಬದಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿಗಾಗಿ ಸಾಕಷ್ಟು ಯೋಜನೆ ಜಾರಿಗೊಳಿಸಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಳ್ಳಿ ಹೇಳಿದರು.

ಸ್ಥಳೀಯ ಪಪಂ ಕೌಶಲಾಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ ಹಾಗೂ ಪಪಂ ಸಹಯೋಗದಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಪಿ.ಎಂ. ಸ್ವನಿಧಿಯ ಸಮೃದ್ಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಅರಿವು ಮೂಡಿಸುವ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅರ್ಹ ಬೀದಿ ಬದಿ ವ್ಯಾಪಾರಸ್ಥರಿಗೆ 10 ಸಾವಿರ ರೂ. ಗಳಿಂದ 50 ಸಾವಿರ ರೂ.ಗಳವರೆಗೆ ಬಂಡವಾಳ ಸಾಲ ನೀಡಲಾಗುತ್ತಿದೆ. ಅದರ ಸದುಪಯೋಗವನ್ನು ಎಲ್ಲ ಅರ್ಹ ಬೀದಿ ಬದಿ ವ್ಯಾಪಾರಸ್ಥರು ಪಡೆದುಕೊಳ್ಳಬೇಕು ಎಂದರು.

ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರದೊಂದಿಗೆ ಪಟ್ಟಣದ ಸ್ವಚ್ಛತೆ ಗೂ ಆದ್ಯತೆ ನೀಡಿಬೇಕು. ಗ್ರಾಹಕರೊಡನೆ ಸೌಜನ್ಯದಿಂದ ವರ್ತಿಸಬೇಕು. ಸ್ವಚ್ಛತೆ ಬಗ್ಗೆ ಗ್ರಾಹಕರಲ್ಲೂ ಜಾಗೃತಿ ಮೂಡಿಸಬೇಕು ಎಂದರು.

ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಮಾತನಾಡಿ, ಪ್ರಧಾನಮಂತ್ರಿ ಸ್ವನಿಧಿ ಯೋಜನೆಯು ಮಾರಾಟಗಾರರು ತಮ್ಮ ವ್ಯವಹಾರಗಳನ್ನು ಉಳಿಸಿಕೊಳ್ಳಲು, ಆರ್ಥಿಕ ಏಣಿಯ ಮೇಲೆ ಏರಲು ಮತ್ತು ಔಪಚಾರಿಕ ಹಣಕಾಸು ವ್ಯವಸ್ಥೆಯಲ್ಲಿ ಸಂಯೋಜಿಸಲು ಸಹಾಯ ಮಾಡುತ್ತದೆ ಎಂದರು.

ಪಪಂ ಸ್ಥಾಯಿ ಕಮಿಟಿ ಚೇರ್ಮನ್ ಮುತ್ತಪ್ಪ ನೂಲ್ಕಿ, ಸದಸ್ಯರಾದ ಶ್ರೀಶೈಲಪ್ಪ ಬಂಡಿಹಾಳ, ಈರಪ್ಪ ಜೋಗಿ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಮಲ್ಲಿಕಸಾಬ್ ರೋಣದ, ವಿ.ವೈ. ಮಡಿವಾಳರ, ರಕ್ಷಿತ, ಶಂಕ್ರಪ್ಪ ದೊಡ್ಡಣ್ಣವರ, ರಮೇಶ ಹಲಗಿಯವರ, ಸಿಆರ್​ಪಿ ಕಾವ್ಯಾ ಅರವಟಗಿಮಠ, ನಜ್ಮಾ ಬೇಲೇರಿ, ಜಮೀಲಾಬೇಗಂ ಬಂಕಾಪೂರ, ಆರೀಫ್ ಮಿರ್ಜಾ, ಉದಯ ಗುಡಿಮನಿ, ಶೇಖಪ್ಪ ಹೊನವಾಡ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net