ಮಹಾಬಲೇಶ್ವರ ಬ್ಯಾಂಕ್ ಯೋಜನೆ ಸದುಪಯೋಗ ಪಡಿಸಿಕೊಳ್ಳಲಿ

27gkn1 MAHABALESHWAR BANK
Published on

ಗೋಕರ್ಣ: ಸ್ಥಳೀಯ ಶ್ರೀ ಮಹಾಬಲೇಶ್ವರ ಸಹಕಾರ ಬ್ಯಾಂಕ್ ತನ್ನ ಸದಸ್ಯರು ಮತ್ತು ಗ್ರಾಹಕರಿಗೆ ಗರಿಷ್ಠ ಸೇವಾ ಸೌಲಭ್ಯ ನೀಡುತ್ತಿದೆ. ಪ್ರತಿ ಆರ್ಥಿಕ ವರ್ಷದಲ್ಲಿ ಲಾಭಾಂಶ ವೃದ್ಧಿಸಿಕೊಳ್ಳುತ್ತಿದ್ದು, ಬ್ಯಾಂಕ್​ನ ಯೋಜನೆಗಳನ್ನು ಸರ್ವರೂ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದು ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ ಹೇಳಿದರು.

ಸ್ಥಳೀಯ ಶ್ರೀ ಭದ್ರಕಾಳಿ ಕಾಲೇಜ್ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬ್ಯಾಂಕ್ ವಾರ್ಷಿಕ ಸರ್ವಸಾಧಾರಣ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ತತ್ವದ ಈ ಬ್ಯಾಂಕ್ ಭಾರತೀಯ ರಿಸರ್ವ ಬ್ಯಾಂಕ್ ನಿಗದಿತ ಮಿತಿಯಲ್ಲಿ ಕಾರ್ಯನಿರ್ವಹಿಸಿ, ಉತ್ತಮ ಆಡಿಟ್ ವರ್ಗೀಕರಣ ಪಡೆದು ಈ ಆರ್ಥಿಕ ವರ್ಷದಲ್ಲಿ 83 ಲಕ್ಷ ರೂ.ಗಳಿಗೂ ಅಧಿಕ ಲಾಭಾಂಶ ದಾಖಲಿಸಿರುವುದು ಹೆಮ್ಮೆಯ ಸಂಗತಿ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಸದಸ್ಯರಿಗೆ ಶೇ. 12 ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ಶಿಫಾರಸು ಮಾಡಿದೆ. ಬ್ಯಾಂಕ್ ವರದಿಯ ವರ್ಷದಲ್ಲಿ 11 ಕೋಟಿ ರೂ. ಗಳಿಗೂ ಹೆಚ್ಚಿನ ಠೇವನ್ನು ಸಂಗ್ರಹಿಸಿ ಒಟ್ಟು 80 ಕೋಟಿ 77 ಲಕ್ಷ ರೂ. ಗಳಿಗೂ ಅಧಿಕ ನಿಕ್ಕಿ ಠೇವನ್ನು ಹೊಂದಿದೆ. ಸದಸ್ಯ ಗ್ರಾಹಕರಿಗೆ ಒಟ್ಟು 53 ಕೋಟಿ 81 ಲಕ್ಷ 88 ಸಾವಿರ ರೂ. ಸಾಲ ನೀಡಲಾಗಿದೆ. ಸಂಸ್ಥೆಯ ಕಟ್​ಬಾಕಿ ಪ್ರಮಾಣ ತೃಪ್ತಿದಾಯಕವಾಗಿದೆ. ಗೃಹೋಪಯೋಗಿ, ಗೋ-ಸಾಕಣೆ, ಸಣ್ಣ ಉದ್ದಿಮೆ, ಗೃಹ ನಿರ್ಮಾಣ ಸೇರಿ ಒಟ್ಟು 14 ಪ್ರಕಾರದ ವಿವಿಧ ಸಾಲ ಯೋಜನೆಗಳನ್ನು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಬಾಂಕ್ ರೂಪಿಸಿದ್ದು, ಇವುಗಳ ಪ್ರಯೋಜನ ಪಡೆಯುವಂತಾಗಬೇಕು. ಇದರೊಂದಿಗೆ ಬ್ಯಾಂಕ್ ಸದಸ್ಯರಿಗಾಗಿ ಕಲ್ಯಾಣ ನಿಧಿ ಯೋಜನೆ, ವೈದ್ಯಕೀಯ ನೆರವು ಮುಂತಾದ ಸೇವಾ ಸೌಲಭ್ಯಗಳನ್ನು ಪ್ರಾರಂಭಿಸಿದ್ದು ಈ ಎಲ್ಲವುಗಳನ್ನು ಅಗತ್ಯವಿರುವವರು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ವಿನಂತಿಸಿದರು.

ಬ್ಯಾಂಕ್ ಉಪಾಧ್ಯಕ್ಷ ವೆಂಕಟ್ರಮಣ ಆರ್.ಕವರಿ ಮತ್ತು ನಿರ್ದೇಶಕರು ಉಪಸ್ಥಿತರಿದ್ದರು. ಬ್ಯಾಂಕ್ ವಾರ್ಷಿಕ ವರದಿಯನ್ನು ಪ್ರಧಾನ ವ್ಯವಸ್ಥಾಪಕ ಆನಂದ ಕಿಶೋರ ಗಾಂವಕರ ಸಭೆಯ ಮುಂದಿಟ್ಟರು. ಸಿಬ್ಬಂದಿ ಶ್ರೀಧರ ಪಡಿಯಾರ್ ನಿರ್ವಹಿಸಿದರು. ಬ್ಯಾಂಕ್ ನಿರ್ದೇಶಕ ರಾಜಗೋಪಾಲ ಅಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net