ನೀರಾವರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ

26 nrp 1
Published on

ಎನ್.ಆರ್.ಪುರ: ಸರ್ಕಾರದಿಂದ ಬಡವರಿಗೆ, ಅರ್ಹರಿಗೆ ನೀರಾವರಿ ಯೋಜನೆಯಡಿ ಮೋಟಾರ್, ಪಂಪ್‌ಸೆಟ್ ಇನ್ನಿತರೆ ಸಲಕರಣೆಗಳನ್ನು ನೀಡಲಾಗಿದ್ದು, ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.

ಮಂಗಳವಾರ ಶಾಸಕರ ಕಚೇರಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ ನೀಡಿದ ಪಂಪ್‌ಸೆಟ್, ಮೋಟಾರ್, ಮೀಟರ್ ಬೋರ್ಡ್ ಸಲಕರಣೆಗಳನ್ನು ವಿತರಿಸಿ ಮಾತನಾಡಿ, ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾಗ್ಯಗಳ ಮೂಲಕ 255 ಕೋಟಿ ಅನುದಾನ ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ತಲುಪಿದೆ. ಇದರಿಂದ ಅವರು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಭಾಗ್ಯಗಳ ಜತೆಗೆ ಅಭಿವೃದ್ಧಿ ಕಾರ್ಯಗಳೂ ಆಗುತ್ತಿವೆ. ಪಿಡಬ್ಲ್ಯೂಡಿ ರಸ್ತೆ ಗುಂಡಿ ಮುಚ್ಚಿಸಿದ್ದು ಶೃಂಗೇರಿ ಕ್ಷೇತ್ರದಲ್ಲಿಯೇ ಮೊದಲು. ಮಳೆ ಕಾರಣದಿಂದಾಗಿ ಕಾಮಗಾರಿ ತಡವಾಗಿದೆ. ಸರ್ಕಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಒಬ್ಬ ಫಲಾನುಭವಿಗೆ ತಲಾ 5 ಲಕ್ಷ ರೂ.ನಂತೆ ಕ್ಷೇತ್ರದ ಶೃಂಗೇರಿ, ಕೊಪ್ಪ ಮತ್ತು ಎನ್.ಆರ್.ಪುರದ 12 ಜನ ಫಲಾನುಭವಿಗಳಿಗೆ ಕೊಳವೆ ಬಾವಿ, ಪಂಪ್‌ಸೆಟ್, ಮೀಟರ್ ಬೋರ್ಡ್, ಮೋಟಾರ್ ಸಾಮಾಗ್ರಿಗಳಿಗಾಗಿ 60 ಲಕ್ಷ ರೂ. ಅನುದಾನ ನೀಡಿದೆ. ಸಂಬಂಧಪಟ್ಟ ಇಲಾಖೆಯವರು ರೈತರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಣಸ್ವಾಮಿ, ಕಾಂಗ್ರೆಸ್ ಮುಖಂಡರಾದ ಪ್ರಶಾಂತ್.ಎಲ್.ಶೆಟ್ಟಿ, ಪಿ.ಆರ್.ಸದಾಶಿವ, ಎಸ್.ಡಿ.ರಾಜೇಂದ್ರ, ಈಚಿಕೆರೆ ಸುಂದರೇಶ್, ಬಿಳಾಲುಮನೆ ಉಪೇಂದ್ರ, ಸುನೀಲ್‌ಕುಮಾರ್, ಎಂ.ಆರ್.ರವಿಶಂಕರ್, ಎಚ್.ಎಂ.ಮನು, ಈ.ಸಿ.ಜೋಯಿ,ದೇವಂತ್‌ಗೌಡ, ಆನೆಗದ್ದೆ ವೆಂಕಟೇಶ್, ದ್ವಾರಮಕ್ಕಿ ಸಂಜಯ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net