ಸರ್ಕಾರಿ ಯೋಜನೆಗಳ ಸದ್ಬಳಕೆ ಆಗಲಿ

7S7S7S7S
Published on

ಇಂಡಿ: ಉದ್ಯಮಶೀಲರು ಸೋಲಿನಿಂದ ಧೃತಿಗೆಡದೆ ಸಮರ್ಥ ಮಾರ್ಗದರ್ಶನ, ಸ್ಪಷ್ಟ ಗುರಿಯೊಂದಿಗೆ ಸತತ ಪ್ರಯತ್ನ ಮಾಡಿದಾಗ ಯಶಸ್ಸು ಸಾಧ್ಯ. ಸರ್ಕಾರದ ಮಹತ್ವಾಕಾಂೆಯ ಯೋಜನೆಗಳು ಸದುಪಯೋಗ ಆಗಬೇಕು ಎಂದು ಉದ್ಯಮಿ ಮಲ್ಲಿಕಾರ್ಜುನ ಹಾವಿನಾಳಮಠ ಹೇಳಿದರು.

ಪಟ್ಟಣದ ಖಾಸಗಿ ರೆಸ್ಟೋರೆಂಟ್​ನಲ್ಲಿ ಶನಿವಾರ ಏರ್ಪಡಿಸಿದ್ದ ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ವಿಜಯಪುರ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯ ಅಭ್ಯರ್ಥಿಗಳಿಗೆ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜವನ್ನು ಸದೃಢವಾಗಿ ಕಟ್ಟಲು ಉದ್ಯಮಶೀಲತೆ ಬಹಳ ಮುಖ್ಯ. ಮಹಿಳೆಯರು, ಯುವಜನರಲ್ಲಿ ಕೌಶಲ ಬೆಳೆಸುವುದು ಅತ್ಯಂತ ಸೂಕ್ತ ಕಾರ್ಯವಾಗಿದೆ. ವಿಜಯಪುರ ಸಿಡಾಕ್​ ಸಂಸ್ಥೆ ಮಾಡುತ್ತಿರುವುದು ಕಾರ್ಯ ಪ್ರಶಂಸನೀಯವಾಗಿದೆ ಎಂದು ಹೇಳಿದರು.

ಸಿಡಾಕ್​ ಜಂಟಿ ನಿರ್ದೇಶಕಿ ಸುಪ್ರಿತಾ ಬಳ್ಳಾರಿ ಅಧ್ಯತೆ ವಹಿಸಿ ಮಾತನಾಡಿ, ಸಿಡಾಕ್​ ಕೇಂದ್ರವು ಸ್ವಯಂ ಉದ್ಯೋಗ ಒದಗಿಸುವುದಕ್ಕಾಗಿ ಎಲ್ಲ ಜಿಲ್ಲೆಗಳಲ್ಲಿ ಉದ್ಯಮಶೀಲತೆ ಅಭಿವೃದ್ಧಿ ತರಬೇತಿ ನೀಡುತ್ತಿದೆ. ಉದ್ಯಮ ಪ್ರಾರಂಭಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಉದ್ಯಮ, ವ್ಯಾಪಾರದ ತರಬೇತಿ ನೀಡಲಾಗುತ್ತದೆ. ಯೋಜನಾ ಅವಕಾಶ ನಿರ್ವಹಣೆ, ಗುಂಪು ಉದ್ಯಶಿಲತೆ, ಯೋಜನಾ ಮೌಲ್ಯಮಾಪನ, ಹಣಕಾಸು ಹೊಂದಿಸುವಿಕೆ ಸೇರಿ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ದೀಪಾಲಯ ಸಂಸ್ಥೆ ಸಂಯೋಜಕಿ ಪ್ರೇಮಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಸಂಗೀತಾ ಬಗಲಿ, ಮಲ್ಲಿಕಾರ್ಜುನ ಬಡಾನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net