

ಮೈಸೂರು: ನಾಡಹಬ್ಬ ದಸರೆ ನಮ್ಮ ಹಬ್ಬ, ನಮ್ಮ ಮನೆಯ ಹಬ್ಬವೆಂಬ ಮನಸ್ಥಿತಿಯೊಂದಿಗೆ ದೀಪಾಲಂಕಾರ ಮಾಡಿ. ಈ ಮೂಲಕ ದಸರಾ ಉತ್ಸವದ ಅಂದ ಹೆಚ್ಚಿಸಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಸರಾವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಬಾರಿ 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರುವುದರಿಂದ ಹೆಚ್ಚು ಮುತುವರ್ಜಿಯಿಂದ ಇದನ್ನು ನಿರ್ವಹಿಸಬೇಕಿದೆ. ದಸರಾ ಆಚರಣೆ ಮತ್ತು ದೀಪಾಲಂಕಾರ ನಮ್ಮ ಬದ್ಧತೆ ಎಂಬ ಮನಸ್ಥಿತಿಯೊಂದಿಗೆ ಎಲ್ಲರೂ ಒಂದಾಗಿ ಆಚರಣೆ ಮಾಡಬೇಕಿದೆ ಎಂದರು.
ದೀಪಾಲಂಕಾರ ದಸರಾ ಅಂದವನ್ನು ಹೆಚ್ಚಿಸುತ್ತದೆ. ಹಾಗಾಗಿ, ಎಲ್ಲರೂ ಒಂದಾಗಿ ದಸರಾ ಆಚರಿಸೋಣ. ಗುತ್ತಿಗೆದಾರರ ಯಾವುದೇ ಸಮಸ್ಯೆಗಳಿದ್ದರೂ ಎಲ್ಲವನ್ನೂ ಬಗೆಹರಿಸುವುದಾಗಿ ಭರವಸೆ ನೀಡಿದರು. ಬಹುತೇಕರು ದಸರಾ ಜಂಬೂಸವಾರಿ ಮೆರವಣಿಗೆ ಮುಗಿದ ನಂತರದಲ್ಲಿ ದೀಪಾಲಂಕಾರ ವೀಕ್ಷಣೆಗಾಗಿ ಬರುತ್ತಾರೆ. ಹೀಗಾಗಿ ಕಡೆಯ 8-10 ದಿನಗಳು ದೀಪಾಲಂಕಾರ ನಿರ್ವಹಣೆ ಮಾಡುವುದು ಸವಾಲಾಗಲಿದೆ ಎಂದರು.
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ ಮಾತನಾಡಿ, ದಸರಾ ದೀಪಾಲಂಕಾರ ವಿಜೃಂಭಣೆಯಿಂದ ಆಗಲು ಗುತ್ತಿಗೆದಾರರ ಪಾತ್ರ ಮುಖ್ಯವಾಗಿದೆ. ಈ ಬಾರಿ ವಿಭಿನ್ನ ರೀತಿಯಲ್ಲಿ ದೀಪಾಲಂಕಾರ ಮಾಡಲು ಚಿಂತನೆ ನಡೆದಿದೆ. 21 ದಿನಗಳವರೆಗೂ ದೀಪಾಲಂಕಾರ ಉಳಿಯುವಂತೆ ಮಾಡುವ ಜತೆಗೆ ಗುಣಮಟ್ಟ ಮತ್ತು ಸುರಕ್ಷತೆಗೂ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
ಸೆಸ್ಕ್ ತಾಂತ್ರಿಕ ನಿರ್ದೇಶಕ ಮುನಿಗೋಪಾಲ್ ರಾಜು ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಲ್ಲಿ ದಸರಾ ದೀಪಾಲಂಕಾರದ ಆಕರ್ಷಣೆ ಹೆಚ್ಚಾಗಿದೆ. ಆದ್ದರಿಂದ ಈ ಬಾರಿ ದೀಪಾಲಂಕಾರಕ್ಕೆ ವಿಶೇಷ ಮೆರಗು ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದ್ದು, ನಿರೀಕ್ಷೆ ಸಹ ಹೆಚ್ಚಿದೆ. ದೀಪಾಲಂಕಾರದಲ್ಲಿ ಹೊಸತನದ ಜತೆಗೆ ಗುಣಮಟ್ಟ, ಸುರಕ್ಷತೆಗೂ ಆದ್ಯತೆ ನೀಡಬೇಕಿದೆ. ಆದ್ದರಿಂದ ಗುಣಮಟ್ಟದ ದೀಪಗಳನ್ನು ಬಳಸುವ ಹಾಗೂ ಉತ್ತಮ ಕೆಲಸ ಮಾಡುವ ಅಗತ್ಯವಿದೆ. 21 ದಿನಗಳವರೆಗೂ ದೀಪಾಲಂಕಾರದ ನಿರ್ವಹಣೆ ಮಾಡಬೇಕಿದ್ದು, ದಸರಾ ಆರಂಭದ 3-4 ದಿನಗಳ ಮೊದಲೇ ಪರಿಪೂರ್ಣವಾದ ಲೈಟಿಂಗ್ ಮಾಡಿ, ಟ್ರಯಲ್ ನೀಡಬೇಕಿದೆ ಎಂದು ತಿಳಿಸಿದರು.
ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ತಮ್ಮ ಬೇಡಿಕೆಗಳನ್ನು ಸಭೆಯಲ್ಲಿ ಚರ್ಚೆ ನಡೆಸಿ ಈ ಬಾರಿ ಸಮಸ್ಯೆ ಆಗದಂತೆ ಕ್ರಮವಹಿಸಬೇಕೆಂದು ಕೋರಿದರು. ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ರಮೇಶ್, ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್ ಸೇರಿದಂತೆ ಇತರರು ಇದ್ದರು.