

ಮಡಿಕೇರಿ: ಗ್ರಾಮೀಣ ಕ್ರೀಡೆಯಾಗಿ ಖ್ಯಾತಿ ಪಡೆಯುತ್ತಿರುವ ಕಬ್ಬಡಿ ಬಗ್ಗೆ ಮಕ್ಕಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಕಾರ್ಯವಾಗಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವೀರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ನಗರದ ಗಾಂಧಿ ಮೈದಾನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಜಿಲ್ಲೆ ೩೧೮೧ನಲ್ಲಿ ರೋಟರಿ ಸದಸ್ಯರಿಗಾಗಿ ಮೊದಲ ಬಾರಿಗೆ ಆಯೋಜಿತ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಎ.ಎಸ್.ಪೊನ್ನಣ್ಣ, ಇತ್ತೀಚಿನ ವರ್ಷಗಳಲ್ಲಿ ಪ್ರೀಮಿಯರ್ ಲೀಗ್ ಮೂಲಕ ಹೆಸರುವಾಸಿಯಾಗುತ್ತಿರುವ ಕಬ್ಬಡಿ ಬಗ್ಗೆ ಮಕ್ಕಳಲ್ಲಿಯೂ ಆಸಕ್ತಿ ಮೂಡಿಸಿ ಪ್ರೋತ್ಸಾಹ ನೀಡುವಂತಾದಲ್ಲಿ ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ಹೆಚ್ಚಿನ ಬೆಂಬಲ ದೊರಕಿದಂತಾಗುತ್ತದೆ ಎಂದರು.
೧೨೦ ವರ್ಷಗಳನ್ನು ಜಾಗತಿಕವಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಪೂರೈಸಿರುವ ರೋಟರಿ ಸಂಸ್ಥೆಯು ಸಾಮಾಜಿಕ ಕಳಕಳಿಯೊಂದಿಗೆ ಕ್ರೀಡಾಕ್ಷೇತ್ರದಲ್ಲಿಯೂ ಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದೂ ಪೊನ್ನಣ್ಣ ಪ್ರಶಂಶಿಸಿದರು.
ರೋಟರಿ ಜಿಲ್ಲೆ ೩೧೮೧ನ ಗವರ್ನರ್ ವಿಕ್ರಂದತ್ತ ಸಭಾ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ವಾರ್ಷಿಕವಾಗಿ ಆಯೋಜಿಸುತ್ತಾ ಬಂದಿದ್ದ ರೋಟರಿಯು ಇದೀಗ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದಲ್ಲಿಯೇ ಮೊದಲ ಬಾರಿಗೆ ಕಬ್ಬಡಿ ಪಂದ್ಯಾಟ ಆಯೋಜಿಸುತ್ತಿರುವುದು ಶ್ಲಾಘನೀಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಟರಿ ವತಿಯಿಂದ ಕಂಬಳ ಆಯೋಜಿಸಿ ಯಶಸ್ವಿಯಾಗಿರುವುದನ್ನು ಶ್ಲಾಘಿಸಿದ ವಿಕ್ರಂದತ್ತ, ಕಬಡ್ಡಿಯನ್ನೂ ಪ್ರತೀ ವರ್ಷ ರೋಟರಿ ಸದಸ್ಯರಿಗಾಗಿ ಮುಂದಿನ ವರ್ಷಗಳಲ್ಲಿ ಆಯೋಜಿಸಲಾಗುತ್ತದೆ ಎಂದು ಭರವಸೆ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ ರೋಟರಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಕಬಡ್ಡಿ ಪಂದ್ಯಾಟ ಆಯೋಜಿಸಿರುವ ದಾಖಲೆಗೆ ಪಾತ್ರವಾಗಿದೆ. ಈ ಮೂಲಕ ರೋಟರಿ ಸದಸ್ಯರಲ್ಲಿ ಕಬ್ಬಡಿ ಪಂದ್ಯಾಟದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಲಾಗಿದೆ ಎಂದು ಹೇಳಿದರು.
ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ನಿವತ್ತ ಜಂಟಿ ಕಾರ್ಯದರ್ಶಿ ಹೊಸೂಕ್ಲು ಉತ್ತಪ್ಪ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕಬಡ್ಡಿಯನ್ನು ಪ್ರೋತ್ಸಾಹಿಸುವ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದರು.
ರೋಟರಿ ಮಿಸ್ಟಿ ಹಿಲ್ಸ್‌ನ ಕಬಡ್ಡಿ ಪಂದ್ಯಾವಳಿ ಸಂಚಾಲಕ ಜಯಂತ್ ಪೂಜಾರಿ ಮಾತನಾಡಿ, ಇದೇ ಮೊದಲ ಬಾರಿಗೆ ರೋಟರಿ ಸದಸ್ಯರಿಗಾಗಿ ಆಯೋಜಿತ ಕಬ್ಬಡಿ ಪಂದ್ಯಾಟಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಆಧುನಿಕ ದಿನಗಳಲ್ಲಿ ಕಬ್ಬಡಿಯಂತ ಜನಪದ ಕ್ರೀಡೆಗೂ ಪ್ರೋತ್ಸಾಹ ನೀಡಿ ಆ ಕ್ರೀಡೆಯ ಮಹತ್ವವನ್ನು, ಸವಾಲುಗಳನ್ನು ರೋಟರಿ ಸದಸ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಮಿಸ್ಟಿ ಹಿಲ್ಸ್ ಕಬ್ಬಡಿ ಪಂದ್ಯಾವಳಿ ಆಯೋಜಿಸಿದೆ ಎಂದು ಮಾಹಿತಿ ನೀಡಿದರು.
ರೋಟರಿ ವಲಯ ೬ರ ಸಹಾಯಕ ಗವರ್ನರ್ ದೇವಣಿರ ಕಿರಣ್, ವಲಯ ಸೇನಾನಿ ಅನಿತಾ ಪೂವಯ್ಯ ವೇದಿಕೆಯಲ್ಲಿದ್ದರು. ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಹೆಚ್.ಟಿ.ಅನಿಲ್, ಕಬ್ಬಡಿ ಸಮಿತಿಯ ಜಂಚಿ ಸಂಚಾಲಕ ದುಗ್ಗಳ ಕಪಿಲ್, ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್ ವಂದಿಸಿದರು. ಗಾಂಧಿ ಮೈದಾನದಲ್ಲಿ ಸುಸಜ್ಜಿತ ರೀತಿಯಲ್ಲಿ ರೂಪಿತವಾದ ಕಬ್ಬಡಿ ಮೈದಾನದಲ್ಲಿ ದಿನವಿಡೀ ರೋಟರಿ ಸದಸ್ಯರ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ರಕ್ತಸಂಗ್ರಹಣಾ ಶಿಬಿರ: ಕೊಡಗು ಜಿಲ್ಲಾ ರೆಡ್ ಕ್ರಾಸ್, ವಿವೇಕಾನಂದ ಯೂತ್ ಮೂವ್ ಮೆಂಟ್ ಮತ್ತು ಜಿಲ್ಲಾ ರಕ್ತನಿಧಿ ಕೇಂದ್ರದ ವತಿಯಿಂದ ಇದೇ ಸಂದರ್ಭ ಆಯೋಜಿತ ರಕ್ತಸಂಗ್ರಹಣಾ ಶಿಬಿರವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ೨೬ ಮಂದಿ ರಕ್ತದಾನ ಮಾಡಿದರು.