ಮಕ್ಕಳಿಗೆ ಶಾಲಾ ಹಂತದಲ್ಲೇ ಕಾನೂನಿನ ಅರಿವು ಮೂಡಿಸಿ

21 SARAG 4
ಸರಗೂರು ತಾಲೂಕಿನ ಪಟ್ಟಣದ ಪ್ರಗತಿ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಆರ್.ಕಿರಣ್ ಮಾತನಾಡಿದರು.ಚಲುವರಾಜು, ಸಂಸ್ಥೆಯ ಮುಖ್ಯ ಶಿಕ್ಷಕ ಸುರೇಶ್, ಸಿಬ್ಬಂದಿ ಇದ್ದರು.
Published on

ಸರಗೂರು: ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರೆ ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಸರಗೂರು ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಆರ್.ಕಿರಣ್ ತಿಳಿಸಿದರು.

ಪಟ್ಟಣದ ಪ್ರಗತಿ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದ ನಾಳಿನ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಕಾನೂನಿನ ಅರಿವು ಹೊಂದುವುದು ಮುಖ್ಯ ಎಂದರು.

ಮಕ್ಕಳಿಗೆ ಕಾನೂನು ಅರಿವಿನ ಮಹತ್ವವನ್ನು ತಿಳಿಸಬೇಕು. ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಸಂಚಾರ ನಿಯಮದ ಬಗ್ಗೆ ತಿಳಿದುಕೊಳ್ಳಬೇಕು. ಮಹಿಳೆಯರು, ಬಾಲಕಿಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಪೋಕ್ಸೋ ಕಾಯ್ದೆ ಸಹಕಾರಿಯಾಗಿದೆ ಎಂದರು.

ವಿದ್ಯಾರ್ಥಿಗಳು ಕಾನೂನು ಅರಿತು ಅದಕ್ಕೆ ಗೌರವ ನೀಡುತ್ತಾ ಜೀವನವನ್ನು ರೂಪಿಸಿಕೊಳ್ಳಬೇಕು. ಕಾನೂನು ಅರಿತು ನಡೆದರೆ ಸಮಸ್ಯೆಗಳನ್ನು ಸರಳವಾಗಿ ನಿಭಾಯಿಸಬಹುದು, ಕಾನೂನಿಗೆ ಗೌರವ ನೀಡಿದರೆ ವ್ಯಕ್ತಿತ್ವ ಬೆಳವಣಿಗೆಗೆ ಪೂರ್ವಕವಾಗುತ್ತದೆ. ಅದರಿಂದ ಪಠ್ಯದ ಜತೆ ಕಾನೂನು ಅರಿವನ್ನು ಹೊಂದುವುದು ಮುಖ್ಯವಾಗುತ್ತದೆ. ಸಮಾಜದಲ್ಲಿ ಕಾನೂನು ಉಲ್ಲಂಘನೆಯಾದಾಗ ಹಾಗೂ ಅಶಾಂತಿ ವಾತಾವರಣ ಉಂಟಾದಾಗ ವಿದ್ಯಾರ್ಥಿಗಳು ಕಾನೂನು ಪಾಲಿಸಿ ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕು ಎಂದು ಸಲಹೆ ನೀಡಿದರು.

ಇಂದಿನ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಇತರ ಅನವಶ್ಯಕ ಕಾರ್ಯಗಳ ಮಾಡದೆ ಶಿಕ್ಷಣದತ್ತ ಗಮನ ಹರಿಸಬೇಕು. ಎಲ್ಲರೂ ಕೀಳರಿಮೆ ಬಿಟ್ಟು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಗುಣಮಟ್ಟದ ಶಿಕ್ಷಣ ಪಡೆದು ಶೈಕ್ಷಣಿಕ ಪ್ರಗತಿ ಹೊಂದಬೇಕು ಎಂದು ತಿಳಿಸಿದರು.

ಪ್ರಗತಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಚಲುವರಾಜು, ಸಂಸ್ಥೆಯ ಮುಖ್ಯ ಶಿಕ್ಷಕ ಸುರೇಶ್, ಸಿಬ್ಬಂದಿ ಸೇರಿದಂತೆ ಮಕ್ಕಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net