ಮಕ್ಕಳಿಗೆ ಸಂಸ್ಕೃತದ ಬಗ್ಗೆ ಅರಿವು ಮೂಡಿಸಿ

24 BIRUR 01
Published on

ಬೀರೂರು: ನಮ್ಮ ಮಾತೃ ಭಾಷೆಯಲ್ಲಿಯೇ ಸಂಸ್ಕೃತ ಅಡಗಿದ್ದು, ಇದು ತಿಳಿದಾಗ ಭಾಷಾ ಕಲಿಕೆ ಸುಲಭ. ಮಕ್ಕಳಲ್ಲಿ ಸಂಸ್ಕೃತ ಕಲಿಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತರಳಬಾಳು ವೇದ ಸಂಸ್ಕೃತ ಮತ್ತು ಜ್ಯೋತಿಷ್ಯ ಪಾಠ ಶಾಲೆ ಮುಖ್ಯಶಿಕ್ಷಕ ಶಂಕರ ಮಂಜುನಾಥ ಹೆಬ್ಬಾರ್ ತಿಳಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಹಾಗೂ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಸಹಯೋಗದಲ್ಲಿ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ಅಸ್ಮಾಕಂ ಸಂಸ್ಕೃತಂ ಸಂಸ್ಕೃತ ಕಲಿಕಾ ಸರಣೆ ಕಾರ್ಯಕ್ರಮದಲ್ಲಿ ಸಂಸ್ಕೃತ ಭಾಷೆ ಹಿರಿಮೆ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಸಂಸ್ಕೃತ ಎಲ್ಲ ಭಾಷೆಗಳಿಗೆ ಪೂರಕವಾಗಿರುವುದರಿಂದ ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಭಾಷೆಯಾಗಿದೆ. ಕನ್ನಡದಲ್ಲಿ ಅನೇಕ ವ್ಯಾಕರಣಾಂಶಗಳಿದ್ದರೂ ಅವೆಲ್ಲವೂ ಸಂಸ್ಕೃತದ್ದೇ ಆಗಿರುವುದರಿಂದ ಎಲ್ಲ ಶಾಲೆಗಳಲ್ಲಿ ಸಂಸ್ಕೃತ ಭೋದಿಸಿದರೆ ನಮ್ಮ ಸಂಸ್ಕೃತಿ, ಸಂಸ್ಕಾರ ದೇಶಾಭಿಮಾನ ಸಹಜವಾಗಿ ಮೂಡುತ್ತದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮಾ ಗಾಂಧಿ, ಡಾ.ಸರ್ವಪಲ್ಲಿ ರಾಧಾಕೃಷ್ಣ,ಸುಭಾಷ್ ಚಂದ್ರಬೋಸ್, ಬಾಲಗಂಗಾಧರ ತಿಲಕ್ ಮುಂತಾದ ಮಹನೀಯರ ಸಂಸ್ಕೃತ ಭಾಷೆ ಅಭಿಮಾನದ ಬಗ್ಗೆ ಸವಿವರ ಮಾಹಿತಿ ನೀಡಿದರು.
ಶ್ರೀ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ ಮುಖ್ಯಶಿಕ್ಷಕ ಚಿದಾನಂದಮೂರ್ತಿ ಮಾತನಾಡಿ, ಸಂಸ್ಕೃತ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಇದನ್ನು ದೇವ ಭಾಷೆಯೆಂದು ಕರೆಯುತ್ತಾರೆ. ಮಕ್ಕಳು ಕನ್ನಡದಷ್ಟೇ ಸರಳವಾಗಿ ಸಂಸ್ಕೃತವನ್ನು ಕಲಿಯಲು ಸಾಧ್ಯ ಎಂದರು. ವಿ.ಸಿ.ಗೀತಾಮಣಿ, ಅನಂತೇಶ್, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net