

ಕಿಕ್ಕೇರಿ : ಮಕ್ಕಳನ್ನು ಸಮಾಜದ ಆಸ್ತಿಯಾಗಿಸಲು ಪಾಲಕರು ಗುಣಮಟ್ಟದ ಶಿಕ್ಷಣ ಕೊಡಿಸಿ ಎಂದು ವಿಜ್ಞಾನಿ ಡಾ.ಕೆ.ಎನ್. ಮೋಹನ್ ತಿಳಿಸಿದರು.
ಇಲ್ಲಿನ ಕುರುಹಿನಶೆಟ್ಟಿ ಸಮಾಜದವರು ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ವಿವಿಧ ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದರು.
ಇಚ್ಛೆಪಟ್ಟು ಓದುವುದು ವ್ಯಕ್ತಿತ್ವ ವಿಕಸನ, ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ. ಹುಟ್ಟಿದ ಊರು, ಓದಿದ ಶಾಲೆ, ಗುರುಹಿರಿಯರನ್ನು ಮರೆತರೆ ಮನುಷತ್ವವನ್ನೇ ಮರೆತಂತೆ. ಕಿಕ್ಕೇರಿಯಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದೆ. ತಮ್ಮ ತಂದೆ ಶಿಕ್ಷಕರಾದರೂ ನಮ್ಮದು ಕಷ್ಟದ ಬದುಕು. ಈಗಿನ ರೀತಿ ಯಾವುದೇ ಸೌಲಭ್ಯ ಇರಲಿಲ್ಲ. ಇಂದಿನ ಮಕ್ಕಳಿಗೆ ಇಂಟರ್‌ನೆಟ್‌ನಿಂದ ಹಿಡಿದು ಎಲ್ಲ ಸೌಲಭ್ಯ ಅಂಗೈಗೆ ಸಿಗುತ್ತಿದೆ. ಓದುವ ಮನಸ್ಸು ಬೇಕಿದೆ ಎಂದರು.
ಮೈಸೂರಿನ ಮಾನಸಗಂಗೋತ್ರಿಯ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷನಾಗಿದ್ದು, ಸಂಶೋಧನಾ, ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು 180ಕ್ಕೂ ಹೆಚ್ಚು ಶಿಷ್ಯರಿದ್ದಾರೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಎಚ್.ಡಿಗೆ ಮಾರ್ಗದರ್ಶನ ಪಡೆದಿದ್ದಾರೆ. ಪ್ರಸ್ತುತ ಕಿಕ್ಕೇರಿಯ ಮಹಾಲಕ್ಷ್ಮೀ ಎಂಎಸ್ಸಿ ವಿದ್ಯಾರ್ಥಿನಿ ಆಗಿದ್ದು ತಮ್ಮ ವಿಭಾಗದಲ್ಲೇ ಅಧ್ಯಯನ ಮಾಡುತ್ತಿದ್ದಾರೆ. ಅವರಂತೆ ಎಲ್ಲರೂ ಶ್ರಮಪಟ್ಟು ಓದಿ ಎಂದರು.
ಅಮೆರಿಕದ ಸ್ಯಾನ್ಪೋರ್ಡ್ ವಿಶ್ವವಿದ್ಯಾಲಯ ವಿಶ್ವದ 6ನೇ ಶ್ರೇಷ್ಠ ವಿಶ್ವವಿದ್ಯಾಲಯವಾಗಿದೆ. ಇವರು ಘೋಷಿಸಿರುವ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲಿ ನನಗೆ 2ನೇ ಸ್ಥಾನ ಸಿಕ್ಕಿರುವುದು ನನ್ನೂರಿಗೆ ನೀಡಿದ ಗೌರವ ಎಂದು ಭಾವಿಸುವೆ. ಹುಟ್ಟೂರಿನ ನಮ್ಮ ಸಮಾಜದವರು ನೀಡಿದ ಗೌರವ ಮರೆಯಲಾರೆ ಎಂದು ಭಾವುಕರಾದರು.
ಡಾ. ಕೆ.ವಿ.ಮೋಹನ್ ಬಾಲ್ಯದ ಗೆಳೆಯ, ಬೆಂಗಳೂರು ನಗರ ಡಿಎಸ್‌ಪಿ ಬಿ.ಬಿ.ಲಕ್ಷ್ಮೇಗೌಡ ಮಾತನಾಡಿದರು. ಕಿಕ್ಕೇರಿ ಸಂಘದ ಅಧ್ಯಕ್ಷ ಸೂರ್ಯನಾರಾಯಣ, ಕಾರ್ಯದರ್ಶಿ ಡಿ. ಉಮೇಶ್, ಮೈಸೂರು ಕುರುಹಿನಶೆಟ್ಟಿ ವಿಚಾರ ವೇದಿಕೆ ಅಧ್ಯಕ್ಷ ಕೆ.ಎಚ್. ಸಂಜೀವಶೆಟ್ಟಿ, ಉಪಾಧ್ಯಕ್ಷ ಗೋವಿಂದಶೆಟ್ಟಿ, ಶಶಿ ಸಂಜೀವಿನಿ ಟ್ರಸ್ಟ್‌ನ ನಾಗೇಶ್, ಕಿಕ್ಕೇರಿ ಹೆಲ್ತ್ ಅಕಾಡೆಮಿ ಸಂಸ್ಥಾಪಕ ಕೆ.ಆರ್.ಕೃಷ್ಣಶೆಟ್ಟಿ, ಕೆಇಬಿ ತಿಮ್ಮಶೆಟ್ಟಿ, ಜೇನುಗೂಡು ಮಹೇಶ್, ವಿನೋದಮ್ಮ, ಸುನೀತಾ ಮತ್ತಿತರರು ಇದ್ದರು.
----------
11ಕೆಕೆಆರ್3
ಕಿಕ್ಕೇರಿಯ ಕುರುಹಿನಶೆಟ್ಟಿ ಸಮಾಜದ ವತಿಯಿಂದ ವಿಜ್ಞಾನಿ ಡಾ. ಕೆ.ಎನ್. ಮೋಹನ್ ದಂಪತಿಯನ್ನು ಗೌರವಿಸಲಾಯಿತು. ಸೂರ್ಯನಾರಾಯಣ, ಕೆ.ಸಿ. ಕೃಷ್ಣಶೆಟ್ಟಿ, ಕೆ.ಎಚ್.ಸಂಜೀವಶೆಟ್ಟಿ, ಜಿ. ಸೋಮಶೇಖರ್, ಬಿ.ಬಿ.ಲಕ್ಷ್ಮೇಗೌಡ, ಬಿ.ಬಿ.ಲಕ್ಷ್ಮೇಗೌಡ ಭಾಗವಹಿಸಿದ್ದರು.
--------