

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯಾಗಿ ಮಾಡಿ. ಅವರಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಹೇಳಿದರು.
ನಗರದ ಕ್ಲಾಸಿಕ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ 14ನೇ ವಾರ್ಷಿಕೋತ್ಸವ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ಶಿಕ್ಷಕರು, ಪಾಲಕರು ಮತ್ತು ಸಮಾಜದ ಜವಾಬ್ದಾರಿ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಲಕ್ಷ್ಮಣ ಉಪ್ಪಾರ ಮಾತನಾಡಿ, ಶಿಕ್ಷಣ, ಶಿಸ್ತು ಮತ್ತು ಅಧ್ಯಾತ್ಮದ ಮೂಲಕ ಮಕ್ಕಳಲ್ಲಿ ಶ್ರೇಷ್ಠತೆ ತುಂಬಬೇಕು ಎಂದರು.
ಬೇವಿನಕೊಪ್ಪ ಆನಂದ ಆಶ್ರಮದ ಶ್ರೀ ವಿಜಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಉಪನಗರ ಠಾಣೆ ಸಿಪಿಐ ದಯಾನಂದ ಶೇಗುಣಶಿ, ತಹಸೀಲ್ದಾರ ಕಲ್ಲನಗೌಡ ಪಾಟೀಲ, ಬೆಳಗಾವಿ ಬ್ಲೂಮಿಂಗ್ ಬಡ್ಸ್ ಶಾಲೆ ಪ್ರಾಚಾರ್ಯ ಸುಷ್ಮಾ ಚರಂತಿಮಠ, ಡಾ. ಎಂ.ವೈ. ಸಾವಂತ, ಡಾ. ಪುನೀತ, ಸಂಧ್ಯಾರಾಣಿ ಇತರರು ಇದ್ದರು.
ಪ್ರಾಚಾರ್ಯ ಮನೋಹರ ಕೆಂಚರಾಹುತ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡ್ರ ನಿರೂಪಿಸಿದರು.