ಪೌತಿ ಖಾತೆ ಆಂದೋಲನ ಸದುಪಯೋಗ ಎಸಿ ಡಾ.ನಾಗರಾಜ್ ಸಲಹೆ

AC, Thahsildar Nadige
Published on

ಚಿಕ್ಕಮಗಳೂರು: ಪೌತಿ ಖಾತೆ ಆಂದೋಲನವನ್ನು ರೈತರು ಸದುಪಯೋಗ ಮಾಡಿಕೊಳ್ಳುವಂತೆ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜ್ ಸಲಹೆ ನೀಡಿದರು. ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ಕಂದಾಯ ಇಲಾಖೆ ಹಾಗೂ ಗ್ರಾಪಂ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರರ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೌತಿ ಖಾತೆ ಆಂದೋಲನದಡಿ ಉಚಿತವಾಗಿ ಪೌತಿ ಖಾತೆ ಮಾಡಿಕೊಡಲಾಗುತ್ತಿದೆ. ಆಂದೋಲನ ಆರಂಭವಾಗಿ ಅನೇಕ ದಿನಗಳು ಕಳೆದರೂ ರೈತರು ಮುಂದೆ ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರಲ್ಲದೆ ಇದೇ ಮಾ.31 ಕೊನೆಯ ದಿನವಾಗಿದ್ದು ಅರ್ಹ ರೈತರು ಪೌತಿ ಖಾತೆಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು.

ಪಹಣಿ ತಿದ್ದುಪಡಿಗೂ ಅವಕಾಶ:
ಪಹಣಿ ತಿದ್ದುಪಡಿಗೂ ಅವಕಾಶ ಕಲ್ಪಿಸಲಾಗಿದ್ದು ತಿದ್ದುಪಡಿ ಮಾಡಿಸಿಕೊಳ್ಳುವವರು ನಾಡಕಚೇರಿಗೆ ಅರ್ಜಿ ಸಲ್ಲಿಸಬೇಕು. ರೈತರು ಕಡ್ಡ್ಡಾಯವಾಗಿ ಜಾಬ್ ಕಾರ್ಡ್ ಮಾಡಿಸಿಕೊಂಡು ವೈಯಕ್ತಿಕ ಸೌಲಭ್ಯಗಳನ್ನು ಪಡೆದುಕೊಳ್ಳುವ ಜತೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮದ ಕೆರೆ, ಕಟ್ಟೆಗಳನ್ನು ಅಭಿವೃದ್ಧಿಪಡಿಸಿ ನೀರಿನ ಸಂರಕ್ಷಣೆ ಮಾಡಬಹುದು ಎಂದು ಮಾಹಿತಿ ನೀಡಿದರು. ತಹಸೀಲ್ದಾರ್ ಡಾ.ಕೆ.ಜೆ.ಕಾಂತರಾಜ್ ಮಾತನಾಡಿ ಕಂದಾಯ ಇಲಾಖೆ ಸಮಸ್ಯೆಗಳನ್ನು ಬಗೆಹರಿಸಲು ರೈತರು ಮಧ್ಯವರ್ತಿಗಳನ್ನು ದೂರ ಇಟ್ಟು ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.

ಪಿಂಚಣಿ ಮಂಜೂರಾತಿ ಪತ್ರ ವಿತರಣೆ:
ಇದೇ ಸಂದರ್ಭದಲ್ಲಿ 18 ಜನ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಪತ್ರ ವಿತರಿಸಲಾಯಿತು. ಗ್ರಾಪಂ ಸದಸ್ಯ ಶಿವಕುಮಾರ್ ಗ್ರಾಮಸ್ಥರಿಗೆ ಉಚಿತವಾಗಿ ಪಟ್ಟಾ ರಶೀದಿ ಪುಸ್ತಕ ವಿತರಿಸಿದರು. ವಿಷನ್ ಚಿಕ್ಕಮಗಳೂರು ವತಿಯಿಂದ ಜಲ ಸಂರಕ್ಷಣೆ ಹಾಗೂ ಕೊಳವೆ ಬಾವಿ ಮರುಪೂರಣ ಘಟಕದ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಗ್ರಾಪಂ ಸದಸ್ಯರಾದ ಮಂಜುಳ, ಗುರು, ಪಿಡಿಒ ಧರ್ಮಪ್ಪ, ಕಾರ್ಯದರ್ಶಿ ಮಹೇಶ್, ರೆವಿನ್ಯೂ ಇನ್ಸ್‍ಪೆಕ್ಟರ್ ಪುಟ್ಟರಾಜು, ಪ್ರಶಾಂತ್. ವಿಷನ್ ಚಿಕ್ಕಮಗಳೂರು ಕಾರ್ಯದರ್ಶಿ ಪ್ರಕಾಶ್ ಕಾರ್ಯಕ್ರಮದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net