

ಮೈಸೂರು; ಆಯುರ್ವೇದ ಚಿಕಿತ್ಸಾ ಪದ್ಧತಿಯು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಆಯುಷ್ ಇಲಾಖೆ ವತಿಯಿಂದ ಚಾಮುಂಡೇಶ್ವರಿ ಕ್ಷೇತ್ರದ ಲಿಂಗಾಂಬುದಿ ಪಾಳ್ಯ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ‘ಆಯುಷ್ ಸೇವಾ ಗ್ರಾಮ’ ವಿಶಿಷ್ಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂದಿನ ಪೀಳಿಗೆಗೆ ಈ ಪದ್ಧತಿಯನ್ನು ತಲುಪಿಸುವ ಕಾರ್ಯ ಮಾಡಬೇಕು. ಆಯುರ್ವೇದ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರ ನಿಯಮಗಳನ್ನು ಬದುಕಿನಲ್ಲಿ ಪಾಲಿಸಬೇಕು. ಇದರಿಂದ ಆತ್ಮಸ್ಥೈರ್ಯ ವೃದ್ಧಿಯಾಗಿ ಗುಣಾತ್ಮಕ ಯೋಚನೆ ಮೂಡುತ್ತದೆ ಎಂದರು.
ಆಯುರ್ವೇದವು ಭಾರತದ ವೈದ್ಯ ಪದ್ಧತಿಯಾಗಿದ್ದು, ಇಂದು ವಿಶ್ವಮನ್ನಣೆ ಪಡೆದುಕೊಂಡಿದೆ. ತನ್ನದೆ ಆದ ವಿಶೇಷ ಶಕ್ತಿಯನ್ನು ಹೊಂದಿದ್ದು, ವ್ಯಕ್ತಿಯ ಪಂಚೇಂದ್ರಿಯಗಳನ್ನು ನಿಯಂತ್ರಿಸುತ್ತದೆ. ಈ ಹಿನ್ನೆಲೆಯಲ್ಲಿ ಆಯುರ್ವೇದವನ್ನು ನಾವು ಚಿಕಿತ್ಸೆಗಿಂತ ಮುಖ್ಯವಾಗಿ ಬದುಕಿನ ಭಾಗ ಎಂದು ಪರಿಗಣಿಸಬೇಕಾಗಿದೆ ಎಂದರು.
ಆಯುರ್ವೇದ ಪದ್ಧತಿ ಅನೇಕ ತಲೆಮಾರುಗಳಿಂದ ಇದ್ದರೂ, ಕರೊನಾ ಬಳಿಕ ಸಾಕಷ್ಟು ಜನಪ್ರಿಯವಾಗಿದೆ. ಆದರೆ, ಅರಿವು ಮತ್ತು ಜ್ಞಾನದ ಕೊರತೆಯಿಂದ ಆಯುರ್ವೇದದ ಬಗ್ಗೆ ಕೆಲವು ತಪ್ಪು ಗ್ರಹಿಕೆಗಳಿವೆ. ಈ ನಿಟ್ಟಿನಲ್ಲಿ ಆಯುಷ್ ಇಲಾಖೆ ಕೈಗೊಂಡಿರುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.
ಇಂದಿನ ಹೈಪರ್ ಟೆನ್ಷನ್ ಪ್ರಪಂಚದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿ ನಿತ್ಯ ಯೋಗ, ಧ್ಯಾನ ಮಾಡಬೇಕು. ಹಣ -ಆಸ್ತಿ ಸಂಪಾದನೆ, ಉಳಿತಾಯ ಮುಂತಾದ ವಿಚಾರಗಳತ್ತ ಗಮನ ಹರಿಸುವಂತೆಯೇ, ಆರೋಗ್ಯದತ್ತಲೂ ಗಮನ ಹರಿಸಬೇಕು. ಇದರಿಂದ ಆರೋಗ್ಯ ವೃದ್ಧಿಯೊಂದಿಗೆ ಆರ್ಥಿಕ ಸಮಸ್ಯೆಗಳೂ ಪರಿಹಾರ ಕಾಣುತ್ತವೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ, ಗ್ರಾಮದ ಮುಖಂಡರಾದ ದೇವಯ್ಯ, ಯೋಗೇಶ್, ಬಂಗಾರಪ್ಪ ರಾಮಣ್ಣ, ಲಕ್ಷ್ಮಯ್ಯ, ದಾಸಯ್ಯ, ಮಲ್ಲಯ್ಯ, ಯಶೋಧ, ಪುಟ್ಟಯ್ಯ, ರಾಮಸ್ವಾಮಿ, ಕೃಷ್ಣಪ್ಪ ಮತ್ತಿತರರಿದ್ದರು.