

ಇಂಡಿ: ನಮ್ಮ ಮತಕ್ಷೇತ್ರದಲ್ಲಿ ಪ್ರತಿಶತ 89ರಷ್ಟು ಜನ ಕೃಷಿಯನ್ನೇ ನಂಬಿದ್ದು, ಅದಕ್ಕಾಗಿ ಅಗತ್ಯ ನೀರಾವರಿ, ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯಮಟ್ಟದ ನಿಂಬೆ ಅಭಿವೃದ್ಧಿ ಮಂಡಳಿಯನ್ನೂ ಇಂಡಿ ಪಟ್ಟಣದಲ್ಲಿ ಸ್ಥಾಪಿಸಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಆಡಳಿತ ಸೌಧ ಆವರಣದಲ್ಲಿ ನಿಂಬೆ ಅಭಿವೃದ್ಧಿ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಲೇಮನ್ ಟೀ ಪಾಯಿಂಟ್’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಭಾಗದಲ್ಲಿ ನಿಂಬೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಈಗ ನಿಂಬೆ ಬೆಳೆಗೆ ಐಜಿ ಟ್ಯಾಗ್ ಲಭಿಸಿದೆ. ಇಂಡಿ ನಿಂಬೆಗೆ ಒಂದು ಬ್ರಾೃಂಡ್ ಸಿಕ್ಕಿದೆ. ಆ ಬ್ರಾೃಂಡ್ ಮೂಲಕ ರೈತರು ನಿಂಬೆ ಹಣ್ಣಿನಿಂದ ಹಲವು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ನನ್ನ ರಾಜಕೀಯ ಇಚ್ಛಾಶಕ್ತಿಯಿಂದ ಮತಕ್ಷೇತ್ರವನ್ನು ಸರ್ವಾಂಗೀಣ ವಿಧದಲ್ಲಿ ಅಭಿವೃದ್ಧಿಪಡಿಸಿದ್ದೇನೆ ಎಂಬ ಸಮಾಧಾನವೂ ಇದೆ. ಬೇಸಿಗೆಯಲ್ಲಿಯೂ ಕಾಲುವೆ ಮೂಲಕ ನೀರು ಹರಿಸಿ ಈ ಭಾಗದ ಜನರಿಗೆ ನೀರಿನ ತೊಂದರೆ ಆಗದಂತೆ ಕ್ರಮ ವಹಿಸಿದ್ದೇನೆ. ಅಧಿಕಾರಿಗಳು ಸಾಕಷ್ಟು ಶ್ರಮಿಸಿದ್ದಾರೆ ಎಂದು ಹೇಳಿದರು.
ತಡವಲಗಾ ಗ್ರಾಮದ ರೈತರಾದ ಅಶೋಕ ಮಿರ್ಜಿ, ಭೀಮರಾಯ ಹೀರಾಪೂರೈ, ಕೃಷ್ಣಪ್ಪ ಮಿರ್ಜಿ, ರಾಮಣ್ಣ ಮಿರ್ಜಿ, ರಾಮಣ್ಣ ಅಂಜುಟಗಿ, ಕಲ್ಯಾಣಿ ಗಣವಲಗಾ, ದಸ್ತಗೀರಸಾಬ ಬಾಗವಾನ, ತಮ್ಮಣ್ಣ ಪೂಜಾರಿ ನಿಂಬೆ ಹಣ್ಣಿನಿಂದ ತಯಾರಿಸಿದ ಬೃಹತ್ ಹಾರವನ್ನು ಶಾಸಕರಿಗೆ ಅರ್ಪಿಸಿದರು.
ಎಸಿ ಅನುರಾಧಾ ವಸದ, ತಹಸೀಲ್ದಾರ್ ಬಿ.ಎಸ್. ಕಡಕಭಾವಿ, ತೋಟಗಾರಿಕೆ ಇಲಾಖೆಯ ಎಚ್.ಎಸ್. ಪಾಟೀಲ, ಕೃಷಿ ಇಲಾಖೆಯ ಮಹಾದೇವಪ್ಪ ಏವೂರ, ಇಒ ನಂದೀಪ ರಾಠೋಡ, ಇಲಿಯಾಸ್ ಬೋರಾಮಣಿ, ಗುರಣ್ಣಗೌಡ ಪಾಟೀಲ, ಜಾವೀದ್ ಮೋಮಿನ್, ನಿಂಬಾಜಿ ರಾಠೋಡ, ಧನರಾಜ ಮುಜಗೊಂಡ ಇತರರಿದ್ದರು.