

ಮದ್ದೂರು: ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಮೆಟ್ರೋ, ಏರ್‌ಪೋರ್ಟ್ ಬೇಡ. ರೈತರಿಗೆ ನೀರಾವರಿ ಯೋಜನೆಗಳನ್ನು ಮಾಡಿಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಶಾಸಕ ಕೆ.ಎಂ.ಉದಯ್ ಮನವಿ ಮಾಡಿದರು.
ತಾಲೂಕಿನ ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಸಮೀಪ ಸೋಮವಾರ ಆಯೋಜಿಸಿದ್ದ ಸಾಧನಾ ಸಮಾವೇಶ ಮತ್ತು 1146 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ ಸಿಎಂ ಮುಂದೆ ಈ ಬೇಡಿಕೆ ಇಟ್ಟರು.
ಕ್ಷೇತ್ರದ ಜನತೆಯ ಆಶೀರ್ವಾದದಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಜನತೆಯ ಋಣ ತೀರಿಸಲು ವಾರದಲ್ಲಿ ನಾಲ್ಕೈದು ದಿನಗಳ ಕಾಲ ಕ್ಷೇತ್ರದಲ್ಲೇ ಇದ್ದುಕೊಂಡು ಹಗಲಿರುಳು ಶ್ರಮಿಸುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇವಲ 2 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ 1146 ಕೋಟಿ ರೂ. ಅನುದಾನ ನೀಡುವ ಮೂಲಕ ಕ್ಷೇತ್ರದ ಜನರ ಋಣ ತೀರಿಸಲು ನನಗೆ ಬೆನ್ನುಲುಬಾಗಿ ನಿಂತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹತ್ತಾರು ವರ್ಷಗಳಿಂದ ರೈತರ ಬೇಸಾಯಕ್ಕೆ ವಿದ್ಯುತ್ ಕೊರತೆಯಿಂದಾಗಿ ಅನ್ನದಾತರ ಸಮಸ್ಯೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ ಸೋಮನಹಳ್ಳಿ ಬಳಿ 220 ಕೆ.ವಿ. ಸಬ್‌ಸ್ಟೇಷನ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದ್ದು, ಇನ್ನು ಮುಂದೆ ವಿದ್ಯುತ್ ಸಮಸ್ಯೆಗೆ ಮುಕ್ತಿ ನೀಡಲಾಗುವುದು ಎಂದರು.
ತಾಲೂಕಿನ ಕೊನೇ ಭಾಗಕ್ಕೆ ಕೆ.ಆರ್.ಎಸ್. ಅಣೆಕಟ್ಟೆಯಿಂದ ನೀರು ಸರಾಗವಾಗಿ ಹರಿಯುವಂತೆ ಮಾಡಲು ನಾಲೆಗಳ ಅಭಿವೃದ್ಧಿಯಾಗಬೇಕಿದೆ. ಈಗಾಗಲೇ ಕಾವೇರಿ ನೀರಾವರಿ ನಿಗಮದ ವತಿಯಿಂದ 500 ಕೋಟಿ ರೂ.ಗೂ ಹೆಚ್ಚು ಅನುದಾನದಲ್ಲಿ ಕೆಮ್ಮಣ್ಣುನಾಲೆ, ಬೈರನ್ ನಾಲೆ, ಮದ್ದೂರು ಕೆರೆ, ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ನಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ. ಅದೇ ರೀತಿ ವಿವಿಧ ನಾಲೆಗಳ ಅಭಿವೃದ್ಧಿ ಮತ್ತು ಶಿಂಷಾ ಬಲದಂಡೆಯ ಕೆರೆಗಳ ಪುನಶ್ಚೇತನಕ್ಕೆ ಅನುದಾನ ನೀಡುವಂತೆ ಕೋರಿದರು.
ಮದ್ದೂರು ಪಟ್ಟಣದ ಪೇಟೆ ಬೀದಿ ವಿಸ್ತರಣೆಗೆ ಅನುದಾನ, ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ, ಪಾಲಿಟೆಕ್ನಿಕ್ ಕಾಲೇಜು, ಕಾನೂನು ಕಾಲೇಜು, ನ್ಯಾಯಾಲಯ ಸಿಬ್ಬಂದಿಗೆ ವಸತಿಗೃಹ, ಭಾರತೀನಗರ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಶಾಸಕ ಕೆ.ಎಂ.ಉದಯ್ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದರು.
ಕ್ಷೇತ್ರದ ಜನರು ಘಟಾನುಘಟಿ ನಾಯಕರನ್ನು ಕೊಟ್ಟಿದ್ದಾರೆ. ಆದರೆ, ಕ್ಷೇತ್ರದಲ್ಲಿ ಇನ್ನೂ ಬಹಳಷ್ಟು ಸಮಸ್ಯೆಗಳು ಆಗಿಯೇ ಉಳಿದಿವೆ. ನಮ್ಮ ಕಾಂಗ್ರೆಸ್ ಸರ್ಕಾರದಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, ಕ್ಷೇತ್ರಕ್ಕೆ 1,150 ಕೋಟಿ ರೂ.ಗೂ ಅಧಿಕ ಅನುದಾನವನ್ನು ಕೊಟ್ಟಿರುವುದಕ್ಕೆ ತಾಲೂಕಿನ ಜನತೆ ಪರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ತಿಳಿಸಲಾಗುವುದು ಎಂದರು.
ಕ್ರೇನ್ ಮೂಲಕ ಬೆಲ್ಲ, ಕಬ್ಬಿನ ಬೃಹತ್ ಹಾರ ಹಾಕಿ ಸ್ವಾಗತ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕ್ರೇನ್ ಮೂಲಕ ಬೃಹತ್ ಬೆಲ್ಲ ಹಾಗೂ ಕಬ್ಬಿನ ಹಾರ ಹಾಕುವ ಮೂಲಕ ಸ್ವಾಗತ ಕೋರಲಾಯಿತು.
ರೈತರು, ವಿವಿಧ ಸಂಘಟನೆಗಳು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ವಿವಿಧ ಇಲಾಖೆಗಳಿಂದ ತೆರೆದಿದ್ದ ಸ್ಟಾಲ್‌ಗಳಿಗೆ ಚಾಲನೆ ನೀಡಿದ ಬಳಿಕ ವೇದಿಕೆಯತ್ತ ಸಿಎಂ, ಡಿಸಿಎಂ, ಸಚಿವರು, ಶಾಸಕರು ಹಾಗೂ ಗಣ್ಯರು ಆಗಮದ ವೇಳೆ ಪುಷ್ಪವೃಷ್ಟಿ ಹರಿಸಿ ಅಭಿಮಾನ ಮೆರೆದರು. ನಂತರ ಜನರತ್ತ ಕೈ ಬೀಸಿ, ಕೈ ಮುಗಿದು ಆಗಮಿಸಿದರು.