ಸಮಾಜಕ್ಕೆ ಮಾದರಿಯಾಗುವಂಥ ಸಾಧನೆ ಮಾಡಿ

mysore
Published on

ಮೈಸೂರು: ಸಾಧನೆ ಎಂಬುದು ಸಮಾಜಕ್ಕೆ ಮಾದರಿಯಾಗಿರಬೇಕು. ಸಮಾಜಕ್ಕೆ ನಿಮ್ಮಿಂದ ಸಿಗುವ ಕೊಡುಗೆ ಮೌಲ್ಯಯುತವಾಗಿದ್ದರೆ ಆ ಸಾಧನೆಗೊಂದು ಅರ್ಥ ಸಿಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜು ತಿಳಿಸಿದರು.


ಮಹಾರಾಜ ಕಾಲೇಜಿನ ಜ್ಯೂನಿಯರ್ ಬಿಎ ಹಾಲ್‌ನಲ್ಲಿ ಗುರುವಾರ ನಡೆದ ಸ್ನಾತಕ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ನಾಲ್ಕು ಜನರಿಗೆ ಮಾದರಿ ವ್ಯಕ್ತಿಯಾಗಿ ಬದುಕಿದರೆ ಅದು ಜೀವನದ ಯಶಸ್ಸು. ಪ್ರಾಪಂಚಿಕ ಜ್ಞಾನ ಪೂರಕವಷ್ಟೇ. ಎಲ್ಲ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಮುಂದೆ ಸಾಗಬೇಕು ಎಂದರು.


ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಕಲಿಕೆಯ ಆಚರಣೆ ಮಾಡಬೇಕು. ವ್ಯಕ್ತಿ ಭವಿಷ್ಯದಲ್ಲಿ ಯಾವುದೋ ಉನ್ನತ ಮಟ್ಟಕ್ಕೆ ಹೋಗಬಹುದು ಅಥವಾ ಯಾವುದೋ ಕೆಟ್ಟ ಸ್ಥಿತಿಗೂ ತಲುಪಬಹುದು. ಉತ್ತಮವಾಗಿ ಬದುಕನ್ನು ಮುನ್ನಡೆಸುವ ಜವಾಬ್ದಾರಿ ಯುವ ಜನರ ಮೇಲಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಯಾರು ಕೂಡ ನಿಮ್ಮ ತಪ್ಪನ್ನು ತಿದ್ದಿ ಸತ್ಯದರ್ಶನ ಮಾಡಲು ಮುಂದಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.


ಕೇವಲ ಕನಸು ಕಾಣುವುದರಿಂದ ಯಶಸ್ಸು ಸಿಗದು. ಅದಕ್ಕಾಗಿ ಸತತ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಅಗತ್ಯ. ಬಾಲ್ಯ, ಯೌವನ ಮತ್ತು ವೃದ್ಧಾಪ್ಯ ಪ್ರಕೃತಿಯ ಸಹಜ ನಿಯಮ. ಪ್ರೌಢಾವಸ್ಥೆಯಲ್ಲೇ ಕಲಿಯಬೇಕಾದದ್ದನ್ನು ಕಲಿತುಬಿಡಬೇಕು. ವಿದ್ಯಾರ್ಥಿಗಳ ಜೀವನ ಬಂಗಾರವಾಗಬೇಕು ಎಂದರು.


ಪ್ರಾಂಶುಪಾಲ ಪ್ರೊ.ಎಚ್.ಸೋಮಶೇಖರಪ್ಪ ಮಾತನಾಡಿ, ಇದುವರೆಗೆ ಕಲಿತದ್ದನ್ನು ಎಲ್ಲಿಯೂ ನಿರ್ಲಕ್ಷಿಸದೆ ನಡೆದು ಬಂದ ಹಾದಿಯನ್ನು ಮರೆಯದೆ ಉತ್ತಮ ದಾರಿಯನ್ನೇ ಬಳಸಿ ಜೀವನದ ಪಯಣವನ್ನು ಸಾಗಿಸಬೇಕು.

ಪ್ರಾಮಾಣಿಕತೆ ಮತ್ತು ಪ್ರಯತ್ನದಿಂದ ಉತ್ತಮ ಗುರಿಯೆಡೆಗೆ ನಿಮ್ಮ ಬದುಕು ಸಾಗಿ ಜೀವನದಲ್ಲಿ ಯಶಸ್ಸು ಲಭಿಸಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು. ಆಡಳಿತಾಧಿಕಾರಿ ಪ್ರೊ.ವಿ.ಷಣ್ಮುಗಂ, ಸಂಚಾಲಕಿ ಹಸೀನಾ ಬೇಗಂ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net