

ವಿಜಯಪುರ: ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶಗಳು ಸಿಗುವಂತೆ ಕಾಯ್ದೆ ರೂಪಿಸಲು ಆಗ್ರಹಿಸಿ ಕರರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ಮತ್ತು ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.
ನಗರದ ಸಿದ್ದೇಶ್ವರ ದೇವಸ್ಥಾನದಿಂದ ಮಹಾತ್ಮ ಗಾಂಧಿ, ಬಸವೇಶ್ವರ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಳಿಕ ಜಿಲ್ಲಾಡಳಿತ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿದರು. ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ಮಾತನಾಡಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇತರ ರಾಜ್ಯಗಳಿಂದ ದೊಡ್ಡ ಪ್ರಮಾಣದ ವಲಸೆ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಇತ್ತೀಚಿನ ಎರಡ್ಮೂರು ದಶಕಗಳಲ್ಲಿ ಇದು ತಾರಕಕ್ಕೆ ಏರಿದೆ. ಮೊದಲು ದಕ್ಷಿಣ ಭಾರತದ ಇತರ ರಾಜ್ಯಗಳಿಂದ ಜನರು ವಲಸೆ ಬಂದು ಇಲ್ಲಿ ನೆಲೆ ನಿಂತರು. ಈಗ ಉತ್ತರದ ರಾಜ್ಯಗಳು, ಈಶಾನ್ಯ ರಾಜ್ಯಗಳಿಂದ ಜನರ ಪ್ರವಾಹವೇ ಹರಿದುಬರುತ್ತಿದೆ. ವಿಶೇಷವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರಿನಂತಹ ಮಹಾನಗರಗಳಲ್ಲಿ ವಲಸೆ ಪ್ರಮಾಣ ಮಿತಿ ಮೀರಿದೆ ಎಂದರು.
ರಾಜ್ಯ ಉಪಾಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ವಲಸೆಯ ದುಷ್ಪರಿಣಾಮದಿಂದಾಗಿ ಕನ್ನಡ ನಾಡಿನ ಭೌಗೋಳಿಕ, ಸಾಮಾಜಿಕ, ರಾಜಕೀಯ ಚಹರೆಯೇ ಬದಲಾಗುತ್ತಿದೆ. ವಿಶೇಷವಾಗಿ ರಾಜ್ಯದ ರಾಜಧಾನಿ ಬೆಂಗಳೂರು ಈ ದೊಡ್ಡ ಪ್ರಮಾಣದ ವಲಸೆಯಿಂದ ಬಸವಳಿದು ಹೋಗುತ್ತಿದೆ. ಈ ಮಹಾವಲಸೆಯ ಬಹುಮುಖ್ಯ ದುಷ್ಪರಿಣಾಮ ಕನ್ನಡದ ಯುವ ಸಮುದಾಯದ ಮೇಲೆ ಅನ್ಯಾಯ ಆಗುತ್ತಿದೆ. ಕನ್ನಡಿಗರಿಗೆ ಈಗ ಉದ್ಯೋಗ ವಿಲ್ಲದಂತಾಗಿದೆ. ಕನ್ನಡದ ನೆಲದಲ್ಲಿ ಸ್ಥಾಪಿತವಾಗಿರುವ ಖಾಸಗಿ ಸಂಸ್ಥೆಗಳು ಹೊರರಾಜ್ಯಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನೇ ನೇಮಿಸಿಕೊಳ್ಳುತ್ತಿದ್ದು, ಅವರು ತಮ್ಮ ತಮ್ಮ ರಾಜ್ಯದ ಯುವಕ ಯುವತಿಯರನ್ನು ಕರೆತಂದು ಕೆಲಸ ಕೊಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಮಾಣ ದಿನೇದಿನೇ ಕುಸಿಯುತ್ತಲೇ ಬರುತ್ತಿದೆ. ಹೀಗೇ ಮುಂದುವರೆದರೆ ಕನ್ನಡಿಗರು ಮುಂಬರುವ ದಿನಗಳಲ್ಲಿ ತಮ್ಮ ನೆಲದಲ್ಲಿ ತಾವೇ ಅತಂತ್ರರಾಗಿ ನರಕಯಾತನೆ ಅನುಭವಿಸುವ ಸ್ಥಿತಿ ಬಂದೊದಗಲಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ರಾಜ್ಯ ಸಂಚಾಲಕ ಸಂತೋಷ ಪಾಟೀಲ (ಡಂಬಳ) ಮಾತನಾಡಿ, ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ದಕ್ಕಬೇಕು ಎಂದು ನಾವೆಲ್ಲರೂ ದಶಕಗಳಿಂದ ಹೋರಾಡುತ್ತ ಬಂದಿದ್ದೇವೆ. ಇನ್ನಾದರೂ ಆ ಹೋರಾಟಕ್ಕೆ ಬೆಲೆ ಸಿಗಬೇಕೆಂದರು.
ಜಿಲ್ಲಾ ಸಂಚಾಲಕ ಸಾಯಬಣ್ಣ ಎಂ. ಮಡಿವಾಳರ, ಅನುರಾಧ ಕಲಾಲ, ಶಿವನಗೌಡ ಗುಜಗೊಂಡ, ಹಾಸಿಂಪೀರ ವಾಲಿಕಾರ, ಸುರೇಶ ಬಿಜಾಪುರ, ಡಾ.ಎಂ.ಡಿ. ಮೇತ್ರಿ, ದಸ್ತಗೀರ ಸಾಲೋಟಗಿ, ಮಹಾದೇವ ರಾವಜಿ, ಮಂಜುಳ ಅಂಗಡಿ, ಪ್ರಶಾಂತ ಚೌದ್ರಿ, ಮಂಜುನಾಥ ಬಡಿಗೇರ, ಮಲ್ಲನಗೌಡ ಬಗಲಿ, ಫಯಾಜ್ ಕಲಾದಗಿ, ಸುರೇಶ ಜತ್ತಿ, ಬಾಳು ಮುಳಜಿ, ವಿನೋದ ದಳವಾಯಿ, ಶ್ರೀಕಾಂತ ಬಿಜಾಪುರ, ಸೋಮು ಬಡಿಗೇರ, ಆನಂದ ಬೂದಿಹಾಳ, ರಾಜು ಕುಲಕರ್ಣಿ, ಹುಚ್ಚಪ್ಪ ತಳವಾರ, ಮನೋಹರ ತಾಜವ, ಸುನೀಲ ಮಾಗೆ, ನಾಗರಾಜ ಅವಟಿ, ಕೃಷ್ಣಾ ಚವಾಣ್, ಈರಣ್ಣ ಕಲ್ಬುರ್ಗಿ, ಸಾದಿಕ್ ಜಾನ್ವೇಕರ, ರವಿ ಹೂಗಾರ, ನಸ್ಸೀಂ ರೋಜಿನ್ದಾರ, ಎಚ್. ಎಸ್. ಕಬಾಡೆ, ರಜಾಕ ಕಾಖಂಡಕಿ, ಪ್ರಕಾಶ ಬಿರಾದಾರ, ಮಹೇಶ ಹೂಗಾರ, ನಾಥು ರಾಠೋಡ, ಸವಿತಾ ಕಂಡೇಕರ ಮತ್ತಿತರರಿದ್ದರು.