ಅಧಿವೇಶನಕ್ಕೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ

IMG20241124193506.jpg
Published on

ಬೆಳಗಾವಿ: ಬೆಳಗಾವಿಯಲ್ಲಿ ವಿಧಾನಮಂಡಳ ಚಳಿಗಾಲ ಅಧಿವೇಶನ ಡಿ.9ರಿಂದ ನಡೆಯಲಿದೆ. ಪ್ರತಿವರ್ಷದಂತೆ ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ಸಿದ್ಥತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಸತಿ, ಸಾರಿಗೆ ಮತ್ತು ಊಟೋಪಹಾರ ಸೇರಿ ಯಾವುದೇ ಅನಾನುಕೂಲ ಆಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ವಿಧಾನಮಂಡಳ ಚಳಿಗಾಲ ಅಧಿವೇಶನದ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ಜರುಗಿದ ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ವೈದ್ಯಕೀಯ ತಂಡಗಳು ಮತ್ತು ಆಂಬುಲೆನ್ಸ್‌ಗಳನ್ನು ನಿಯೋಜಿಸಬೇಕು. ಸುವರ್ಣ ವಿಧಾನಸೌಧದ ಒಳಗಡೆಯ ಕಾರಿಡಾರ್‌ಗಳಲ್ಲಿ ಹಾಗೂ ಮೊಗಸಾಲೆಯಲ್ಲಿ ಪಾವತಿ ಆಧಾರದ ಮೇಲೆ ವಿವಿಧ ಬಗೆಯ ಚಹಾ ಹಾಗೂ ಅಲ್ಪೋಪಹಾರ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು. ಪ್ರತಿಭಟನಾ ಸ್ಥಳಗಳ ನಿರ್ವಹಣೆ ಹಾಗೂ ಸೂಕ್ತಭದ್ರತೆ ಬಗ್ಗೆಯೂ ಅಗತ್ಯ ಕ್ರಮ ವಹಿಸಬೇಕು. ನಗರದ ರಸ್ತೆಗಳು ಸೇರಿ ನಗರ ಪ್ರವೇಶಿಸುವ ರಸ್ತೆಗಳ ದುರಸ್ತಿ ಕಾರ್ಯ ಕೂಡಲೇ ಕೈಗೆತ್ತಿಕೊಂಡು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ವಸತಿ, ಸಾರಿಗೆ ಹಾಗೂ ಊಟೋಪಹಾರ ವ್ಯವಸ್ಥೆ ಸೇರಿ ಸುಗಮ ಅಧಿವೇಶನಕ್ಕಾಗಿ ಹತ್ತು ಸಮಿತಿಗಳನ್ನು ರಚಿಸಲಾಗಿದೆ. ಕಳೆದ ಬಾರಿಯಂತೆ ವಿವಿಧ ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಪ್ರತಿವರ್ಷದಂತೆ ಅಧಿವೇಷನದಲ್ಲಿ ಭಾಗವಹಿಸುವ ಅಧಿಕಾರಿಗಳು, ಸಿಬ್ಬಂದಿ ಮತ್ತು ಕಲಾಪ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಪಾಸ್ ವ್ಯವಸ್ಥೆ ಮಾಡಲಾಗುತ್ತಿದೆ. ಸುವರ್ಣ ಸೌಧದ ಮುಖ್ಯ ಪ್ರವೇಶ ದ್ವಾರದಿಂದ ಒಳಗಡೆ ಆವರಣದವರೆಗೆ ಸಾರ್ವಜನಿಕರಿಗೆ ಕರೆದೊಯ್ಯಲು ಉಚಿತ ಬಸ್ ವ್ಯವಸ್ಥೆ ಕೂಡ ಈ ಬಾರಿ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು. ಎಸ್ಪಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಅಂದಾಜು 6 ಸಾವಿರ ಜನ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಮೂಲಕ ಪ್ರತಿ ವರ್ಷದಂತೆ ಬಿಗಿ ಭದ್ರತೆ ಕಲ್ಪಿಸಲಾಗುವುದು. ಸಾರಿಗೆ ನಿರ್ವಹಣೆಗೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು. ಡಿಸಿಪಿ ರೋಹನ್ ಜಗದೀಶ, ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪಾಲಿಕೆ ಆಯುಕ್ತೆ ಶುಭಾ ಬಿ., ಜಿಪಂ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಟರ, ಕಾಡಾ ಆಡಳಿತಾಧಿಕಾರಿ ಸತೀಶಕುಮಾರ್, ಲೊಕೋಪಯೋಗಿ ಇಲಾಖೆ ಅಭಿಯಂತರ ಎಸ್.ಎಸ್. ಸೊಬರದ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಆಹಾರ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net