

ತಿ.ನರಸೀಪುರ: ಅಪಘಾತ ಅಥವಾ ಅನಾರೋಗ್ಯದ ತುರ್ತು ಸಂದರ್ಭಗಳಲ್ಲಿ ಅಮೂಲ್ಯವಾದ ಜೀವ ಉಳಿಸಲು ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ಮೈಸೂರು ಕೆ.ಆರ್.ಆಸ್ಪತ್ರೆಯ ರಕ್ತ ನಿಧಿಯ ವೈದ್ಯೆ ಡಾ.ಸ್ಟೆಫಿ ಮನವಿ ಮಾಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಸ್ವಯಂ ಪ್ರೇರಿತ ರಕ್ತದಾನ ಮಾಡುವುದು ನಿಜಕ್ಕೂ ಬದುಕನ್ನು ಸಾರ್ಥಕ ಗೊಳಿಸುತ್ತದೆ ಎಂದು ಶ್ಲಾಘಿಸಿದರಲ್ಲದೆ ರಕ್ತದಾನದ ಮಹತ್ವದ ಕುರಿತು ಯುವ ಜನತೆಯಲ್ಲಿ ಅರಿವು ಅಗತ್ಯ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ.ಉದಯಕುಮಾರ್ ಮಾತನಾಡಿ, ವೈದ್ಯಕೀಯ ಅನಿರೀಕ್ಷಿತ ಪರಿಸ್ಥಿತಿಗಳು ಎದುರಾದಾಗ ಶಸ್ತ್ರ ಚಿಕಿತ್ಸೆಗೋ ಅಥವಾ ಅಪಘಾತವಾದಾಗ ರೋಗಿ ಮತ್ತು ಗಾಯಾಳುವಿಗೆ ರಕ್ತದ ಅಗತ್ಯತೆ ಅನಿವಾರ್ಯವಾಗುತ್ತದೆ. ಈ ಸಂದರ್ಭದ ಗಂಭೀರತೆ ಅರಿತು ಯುವ ಜನತೆ ಮತ್ತು ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ಯುವ ರೆಡ್‌ಕ್ರಾಸ್ ಘಟಕ, ಎನ್‌ಎಸ್‌ಎಸ್ ಘಟಕ ಮತ್ತು ರೋವರ್ಸ್ ಮತ್ತು ರೇಂಜರ್ಸ್ ಘಟಕ, ಮಹಿಳಾ ದೌರ್ಜನ್ಯ ತಡೆ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಂದ ಸ್ವಯಂ ಪ್ರೇರಿತವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಾಲೇಜಿನ 60 ವಿದ್ಯಾರ್ಥಿಗಳು ಮೈಸೂರಿನ ಕೆ.ಆರ್. ಆಸ್ಪತ್ರೆಯ ರಕ್ತ ನಿಧಿಗೆ ರಕ್ತದಾನ ಮಾಡಿದರು. ತಾಲೂಕು ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ತಪಾಸಣಾ ಶಿಬಿರದಲ್ಲಿ ವಿದ್ಯಾರ್ಥಿಗಳು ವೈದ್ಯರಿಂದ ಸೂಕ್ತ ಸಲಹೆಗಳು ಮತ್ತು ಚಿಕಿತ್ಸೆ ಪಡೆದರು.
ಇದೇ ವೇಳೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಮೀನಾಕ್ಷಿ, ಬೆಳಕು ಸಂಸ್ಥೆಯ ಅಧ್ಯಕ್ಷ ಅರವಿಂದ್, ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಬಿ.ಎಂ.ರಾಮಮೂರ್ತಿ, ಪ್ರಾಧ್ಯಾಪಕರಾದ ದೇವರಾಜಿಗೌಡ, ಡಾ.ರೇಷ್ಮಾ ಚೆಂಗಪ್ಪ, ಡಾ.ಕೆ.ಕೆ.ಮುತ್ತಮ್ಮ, ಡಾ.ಅಮಿತ್, ಡಾ. ಪುಟ್ಟಸ್ವಾಮಿ, ಡಾ.ಕೆಂಪರಾಜು ಇತರರು ಇದ್ದರು.